
Ashwaveega News 24×7 ಸೆ. 26: ಭಾರತೀಯ ವಾಯುಪಡೆ ಹೆಮ್ಮೆಯ, ರಷ್ಯಾ ಮೂಲದ ಸೂಪರ್ಸಾನಿಕ್ ಜೆಟ್ ಮಿಗ್ 21ಗೆ ಇಂದು ವಿದಾಯ ಹೇಳಲಾಗಿದೆ. ಕಾರ್ಗಿಲ್ ಯುದ್ಧ ಹಾಗು ಬಾಲಾಕೋಟ್ ಏರ್ಸ್ಟ್ರೈಕ್ ಸೇರಿ ಅನೇಕ ಸಂಘರ್ಷಗಳಲ್ಲಿ ಯುದ್ಧ ವಿಮಾನ ಮಿಗ್ 21 ಮಹತ್ವದ ಪಾತ್ರ ವಹಿಸಿತ್ತು.
ಸುಮಾರು 62 ವರ್ಷಗಳ ಕಾಲ ಸುದೀರ್ಘ ಸೇವೆ ಸಲ್ಲಿಸಿದ ಫೈಟರ್ ಜೆಟ್ ಮಿಗ್ 21ಗೆ ಇಂದು ಭಾರತೀಯ ವಾಯು ಪಡೆ ವಿದಾಯ ಹೇಳಿದೆ. 1965 ಮತ್ತು 1971ರ ಯುದ್ಧಗಳಿಂದ 1999ರ ಕಾರ್ಗಿಲ್ ಯುದ್ಧ ಹಾಗೂ ಬಾಲಾಕೋಟ್ ದಾಳಿಯವರೆಗೆ, ಸುಮಾರು ಆರು ದಶಕಗಗಳ ಕಾಲ ಮಿಗ್21 ಜೆಟ್ ಭಾರತೀಯ ವಾಯು ಪಡೆಯಲ್ಲಿ ಸುದೀರ್ಘವಾದ ಸೇವೆ ಸಲ್ಲಿಸಿದೆ.
1963 ರಲ್ಲಿ ಚಂಡೀಗಢದ ವಾಯಪಡೆ ನಿಲ್ದಾಣದಲ್ಲಿ ಸೂಪರ್ಸಾನಿಕ್ ಮಿಗ್21 ಫೈಟರ್ಜೆಟ್ ಉದ್ಘಾಟನೆ ಮಾಡಲಾಗಿತ್ತು. ಇಂದು ಅದೇ ಸ್ಥಳದಲ್ಲಿ ಮಿಗ್21 ನಿವೃತ್ತಿ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಸಮಾರಂಭಕ್ಕೂ ಮುನ್ನ ಐಎಎಫ್ ತನ್ನ ಎಕ್ಸ್ ಖಾತೆಯಲ್ಲಿ “ಆರು ದಶಕಗಳ ಸೇವೆ, ಲೆಕ್ಕವಿಲ್ಲದಷ್ಟು ಧೈರ್ಯದ ಕಥೆಗಳು, ರಾಷ್ಟ್ರದ ಹೆಮ್ಮೆಯನ್ನು ಆಕಾಶಕ್ಕೆ ಕೊಂಡೊಯ್ದ ಯುದ್ಧ ಕುದುರೆ” ಎಂದು ಮಿಗ್ 21 ನನ್ನು ಹಾಡಿ ಹೊಗಳಿದೆ.
ಮಿಗ್ 21 ನಿವೃತ್ತಿ ಸಮಾರಂಭದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್, ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಜನರಲ್ ಅನಿಲ್ ಚೌಹಾಣ್, ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ, ವಾಯುಪಡೆ ಮುಖ್ಯಸ್ಥ ಮಾರ್ಷಲ್ ಎಪಿ ಸಿಂಗ್ ಮತ್ತು ನೌಕಾಪಡೆ ಮುಖ್ಯಸ್ಥ ಅಡ್ಮಿರಲ್ ದಿನೇಶ್ ಕೆ ತ್ರಿಪಾಠಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.