
Ashwaveega News 24×7 ಅ. 15: ರಾಜಧಾನಿ ಬೆಂಗಳೂರಿನ ಮನೆಯೊಂದರಲ್ಲಿ ನಿಗೂಢವಾಗಿ ಸ್ಫೋಟಗೊಂಡಿದ್ದು, ಬಾಲಕ ಸಾವನ್ನಪ್ಪಿ, 8 ಮಂದಿ ಗಾಯಗೊಂಡಿರುವ ದುರ್ಘಟನೆ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮುಬಾರಕ್ (10) ಸಾವನ್ನಪ್ಪಿದ ದುದೈರ್ವಿ. ಘಟನೆಯಲ್ಲಿ ಕಸ್ತೂರಮ್ಮ (35), ಸರಸಮ್ಮ (50), ಶಬ್ರೀನಾ ಬಾನು (35) ಫಾತೀಮಾ (8),ಕಯಾಲ (8), ಸುಬ್ರಹ್ಮಣಿ (62) ಆಸ್ಪತ್ರೆ ಶೇಕ್ ನಜೀಬ್ ಉಲ್ಲಾ ( 37) ಗಾಯಗೊಂಡಿದ್ದು, ಇವರಿಗೆ ವಿಕ್ಟೋರಿಯಾ, ಸಂಜಯಗಾಂಧಿ ಸೇರಿದಂತೆ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿಲ್ಸನ್ ಗಾರ್ಡನ್ನ ಚಿನ್ನಯ್ಯಪಾಳ್ಯದ ಶ್ರೀರಾಮ ಕಾಲೋನಿಯ ಮನೆಯೊಂದರಲ್ಲಿ ಇಂದು ಬೆಳಗ್ಗೆ 8 ಗಂಟೆ ಸುಮಾರಿಗೆ ದುರ್ಘಟನೆ ಸಂಭವಿಸಿದೆ. ಆರಂಭದಲ್ಲಿ ಸಿಲಿಂಡರ್ ಸ್ಫೋಟಗೊಂಡಿರಬಹುದು ಎಂದು ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದರು. ಮಾಹಿತಿ ಆಧರಿಸಿ ಸ್ಥಳಕ್ಕೆ ಬಂದ ಪೊಲೀಸರು ನಿಗೂಢ ರೀತಿ ಸ್ಫೋಟಗೊಂಡಿರುವುದಾಗಿ ಪ್ರಾಥಮಿಕ ತನಿಖೆಯಲ್ಲಿ ಕಂಡುಕೊಂಡಿದ್ದಾರೆ. ಸದ್ಯಕ್ಕೆ ಸುಕೊ ಹಾಗೂ ಎಫ್ ಎಸ್ ಎಲ್ ತಂಡವು ಸ್ಥಳದಲ್ಲಿ ಬೀಡುಬಿಟ್ಟಿದ್ದು ಪರಿಶೀಲನೆ ನಡೆಸುತ್ತಿದೆ.
ಗಾಯಗೊಂಡವರ ಪೈಕಿ ಕಸ್ತೂರಮ್ಮ ಎಂಬುವರ ಮನೆಯಲ್ಲಿ ನಿಗೂಢ ಸ್ಫೋಟದ ರಭಸಕ್ಕೆ ಐದಾರು ಮನೆಗಳು ಛಿದ್ರಗೊಂಡಿವೆ. ವಸತಿ ಪ್ರದೇಶವಾಗಿರುವ ಶ್ರೀರಾಮ ಕಾಲೋನಿಯಲ್ಲಿ ಸಣ್ಣ-ಸಣ್ಣ ಮನೆಗಳಿದ್ದು ಬ್ಲಾಸ್ಟ್ ಆದ ಮನೆ ಸುತ್ತಮುತ್ತ ಮನೆಗಳಿಗೂ ಸಂಪೂರ್ಣ ಹಾನಿಯಾಗಿವೆ. ಸ್ಫೋಟಕ್ಕೆ ನಿಖರ ಕಾರಣ ಪತ್ತೆ ಹಚ್ಚುವಲ್ಲಿ ಪೊಲೀಸರು ನಿರತರಾಗಿದ್ದಾರೆ.