
AATI AMAVASYA IN TULUNADU
Ashwaveega News 24×7 ಜು. 24: ಪ್ರತಿ ವರ್ಷ ಆಷಾಢ ಮಾಸದಲ್ಲಿ ಬರುವ ಅಮಾವಾಸ್ಯೆಯು ದೇಶಾದ್ಯಂತ ಹಲವು ಧಾರ್ಮಿಕ ಮಹತ್ವಗಳನ್ನು ಹೊಂದಿದ್ದರೂ, ಕರಾವಳಿ ಕರ್ನಾಟಕದ ತುಳುನಾಡಿನಲ್ಲಿ ಈ ದಿನವನ್ನು ‘ಆಟಿ ಅಮಾವಾಸ್ಯೆ’ ಎಂದು ವಿಶೇಷವಾಗಿ ಆಚರಿಸಲಾಗುತ್ತದೆ. ಈ ದಿನ ಕೇವಲ ಪಿತೃಕಾರ್ಯಗಳಿಗೆ ಸೀಮಿತವಾಗಿಲ್ಲ, ಬದಲಾಗಿ ವಿಶಿಷ್ಟ ಆರೋಗ್ಯಪೂರ್ಣ ಆಚರಣೆಗಳು ಮತ್ತು ಪ್ರಕೃತಿಯೊಂದಿಗಿನ ಅವಿನಾಭಾವ ಸಂಬಂಧವನ್ನು ಬಿಂಬಿಸುತ್ತದೆ.
ಮಳೆಗಾಲದ ತಿಂಗಳಾದ ‘ಆಟಿ’ಯಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳುವ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿಕೊಳ್ಳುವ ಸಂಕೇತವಾಗಿರುವ ಈ ಅಮಾವಾಸ್ಯೆಯು, ತುಳುನಾಡಿನ ಜನಜೀವನದಲ್ಲಿ ಹಾಸುಹೊಕ್ಕಾಗಿ ಬೆರೆತುಹೋಗಿದೆ. ಈ ಆಟಿ ಅಮಾವಾಸ್ಯೆಯು ಏಕೆ ಇಷ್ಟೊಂದು ಮಹತ್ವ ಪಡೆದಿದೆ ಗೊತ್ತಾ..?
ಸಾಮಾನ್ಯವಾಗಿ ಆಷಾಢ ಅಮಾವಾಸ್ಯೆ, ಭೀಮನ ಅಮಾವಾಸ್ಯೆ, ಅಥವಾ ಅಳಿಯನ ಅಮಾವಾಸ್ಯೆ ಎಂದೂ ಕರೆಯುತ್ತಾರೆ. ಆದರೆ, ‘ಆಟಿ ಅಮಾವಾಸ್ಯೆ’ ಎಂಬ ಹೆಸರು ವಿಶೇಷವಾಗಿ ತುಳುನಾಡಿನಲ್ಲಿ (ಕರಾವಳಿ ಕರ್ನಾಟಕದ ಪ್ರದೇಶ) ಪ್ರಚಲಿತದಲ್ಲಿದೆ.
ಆಷಾಢ ಮಾಸವನ್ನು ತುಳುನಾಡಿನಲ್ಲಿ ‘ಆಟಿ ತಿಂಗಳು’ ಎಂದು ಕರೆಯಲಾಗುತ್ತದೆ. ಈ ತಿಂಗಳು ಭಾರೀ ಮಳೆ, ಕೃಷಿ ಚಟುವಟಿಕೆಗಳ ವಿರಾಮ ಮತ್ತು ಕೀಟಗಳ ಹಾವಳಿಯಿಂದಾಗಿ ಜನರಿಗೆ ಕಷ್ಟದ ತಿಂಗಳೆಂದು ಪರಿಗಣಿಸಲಾಗುತ್ತದೆ. ಈ ಸವಾಲುಗಳ ನಡುವೆಯೂ ಆರೋಗ್ಯವನ್ನು ಕಾಪಾಡಿಕೊಳ್ಳುವ ಮತ್ತು ಸಾಂಪ್ರದಾಯಿಕ ಆಚರಣೆಗಳನ್ನು ಉಳಿಸಿಕೊಳ್ಳುವ ಉದ್ದೇಶದಿಂದ ಆಟಿ ಅಮಾವಾಸ್ಯೆಗೆ ವಿಶೇಷ ಮಹತ್ವವಿದೆ.
ಆಟಿ ಅಮಾವಾಸ್ಯೆಯ ಪ್ರಮುಖ ಆಚರಣೆಯೆಂದರೆ ‘ಪಾಲೆ ಮರ’ (ಸಪ್ತಪರ್ಣಿ ಅಥವಾ ಡೆವಿಲ್ ಟ್ರೀ – Alstonia scholaris) ದ ತೊಗಟೆಯಿಂದ ತಯಾರಿಸಿದ ಕಷಾಯವನ್ನು ಸೇವಿಸುವುದು.
ಅಮಾವಾಸ್ಯೆಯ ಹಿಂದಿನ ದಿನವೇ ಪಾಲೆ ಮರವನ್ನು ಗುರುತಿಸಿ, ಮುಂಜಾನೆ ಸೂರ್ಯೋದಯಕ್ಕೂ ಮುನ್ನ, ಶುಚಿಯಾಗಿ ಹೋಗಿ ಅದರ ತೊಗಟೆಯನ್ನು ತರಲಾಗುತ್ತದೆ. ಈ ತೊಗಟೆಗೆ ಓಮ, ಬೆಳ್ಳುಳ್ಳಿ, ಅರಿಶಿನ, ಕರಿಮೆಣಸು ಸೇರಿಸಿ ಕಲ್ಲಿನಲ್ಲಿ ಅರೆದು ರಸ ತೆಗೆಯಲಾಗುತ್ತದೆ. ಈ ರಸಕ್ಕೆ ಕೆಂಡದಲ್ಲಿ ಕಾಯಿಸಿದ ಬಿಳಿಕಲ್ಲನ್ನು ಹಾಕಿ ಕಷಾಯ ತಯಾರಿಸಲಾಗುತ್ತದೆ.
ಈ ಕಷಾಯವು ಕಹಿಯಾಗಿದ್ದರೂ, ಇದರಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ, ದೇಹದಲ್ಲಿನ ವಿಷಕಾರಿ ಅಂಶಗಳನ್ನು ಹೊರಹಾಕುವ, ಜೀರ್ಣಕ್ರಿಯೆಯನ್ನು ಸುಧಾರಿಸುವ ಮತ್ತು ರಕ್ತದೊತ್ತಡ ಹಾಗೂ ಕೊಲೆಸ್ಟ್ರಾಲ್ ನಿಯಂತ್ರಿಸುವ ಗುಣಗಳಿವೆ ಎಂದು ನಂಬಲಾಗಿದೆ.
ಇದು ಮಳೆಯ ದಿನಗಳಲ್ಲಿ ಬರುವ ಕಾಯಿಲೆಗಳಿಂದ ದೇಹವನ್ನು ರಕ್ಷಿಸುತ್ತದೆ ಎಂಬುದು ತುಳುನಾಡಿನ ಜನರ ಬಲವಾದ ನಂಬಿಕೆ. ಹಾಗಾಗಿ ಆಟಿ ಅಮಾವಾಸ್ಯೆಯ ಹಾಲೆ ಮರದ ಕಷಾಯ ಸೇವನೆಯು ತುಳುನಾಡಿನ ಐತಿಹಾಸಿಕ ಪರಂಪರೆಯ ಒಂದು ಭಾಗವಾಗಿದೆ. ಈ ಸಂಪ್ರದಾಯವನ್ನು ಉಳಿಸಿಕೊಂಡು ಹೋಗುವ ಕಾರ್ಯವು ನಡೆಯುತ್ತಿದೆ.