ದಾವಣಗೆರೆ:
ಹೊನ್ನಾಳಿ ತಾಲ್ಲೂಕಿನ ಕ್ಯಾಸಿನಕೆರೆ ಮತ್ತು ಲಿಂಗಾಪುರದಲ್ಲಿ ನಕಲಿ ವೈದ್ಯರನ್ನು ಪತ್ತೆಹಚ್ಚಿದ ಅಧಿಕಾರಿಗಳು, ಇಬ್ಬರಿಗೂ ತಲಾ ಲಕ್ಷ ರೂ.ಗಳ ದಂಡ ವಿಧಿಸಿದ್ದು, ಮೆಡಿಕಲ್ ಸ್ಟೋರ್ಗಳನ್ನು ಮುಚ್ಚುವಂತೆ ಆದೇಶಿಸಿದ್ದಾರೆ. ಜಿಲ್ಲಾಧಿಕಾರಿ ಹಾಗೂ ಕೆಪಿಎಂಇ ನೊಂದಣಿ ಪ್ರಾಧಿಕಾರ ಹಾಗೂ ಸಾರ್ವಜನಿಕ ಕುಂದುಕೊರತೆ ನಿವಾರಣಾ ಸಮಿತಿ ಈ ನಿರ್ಧಾರ ಕೈಗೊಂಡಿದೆ. ಈ ಸಂಬಂಧ ಅಧ್ಯಕ್ಷರು ಜಿ.ಎಂ. ಗಂಗಾಧರಸ್ವಾಮಿ ಆದೇಶಿಸಿದ್ದಾರೆ.
ಭದ್ರಾವತಿ ತಾಲ್ಲೂಕಿನ ಸನ್ಯಾಸಿಕೊಡಮಗ್ಗಿ ಗ್ರಾಮದ 57 ವರ್ಷದ ಶ್ರೀನಿವಾಸ್ ಎಂಬಾತನು ಹೊನ್ನಾಳಿ ತಾಲ್ಲೂಕಿನ ಲಿಂಗಾಪುರದಲ್ಲಿ ಮನೆ ಬಾಡಿಗೆ ಪಡೆದಿದ್ದು, ತನ್ನ ಶ್ರೀ ರಾಮಾಂಜನೇಯ ಮೆಡಿಕಲ್ಸ್ ಮತ್ತು ಜನರಲ್ ಸ್ಟೋರ್ ಮೂಲಕ ನಕಲಿ ಕ್ಲಿನಿಕ್ನ್ನು ನಡೆಸುತ್ತಿದ್ದನು. ಈ ಮೇಲಿಂದಾಗಿ ಮೆಡಿಕಲ್ ಸ್ಟೋರ್ ಪರವಾನಗಿ ರದ್ದುಪಡಿಸಿ ಲಕ್ಷ ರೂಪಾಯಿಯ ದಂಡ ವಿಧಿಸಲಾಗಿದೆ.
ಮತ್ತೊಬ್ಬ ನಕಲಿ ವೈದ್ಯ ಹಿರೇಕೇರೂರು ತಾಲ್ಲೂಕಿನ ಹಿರೇ ಮರಬ ಗ್ರಾಮದ ಲಕ್ಷ್ಮಣ, ಇವರು ಕ್ಯಾಸಿನಕೆರೆಯಲ್ಲಿ ಅನಧಿಕೃತವಾಗಿ ಹಲವು ವರ್ಷಗಳಿಂದ ಕ್ಲಿನಿಕ್ ನಡೆಸುತ್ತಿದ್ದರು. ತಪಾಸಣೆ ವೇಳೆ B.E.M.S ಪ್ರಮಾಣ ಪತ್ರವನ್ನು ನೀಡಿದ್ದರೂ, ಅದು ಅಮಾನ್ಯವಾಗಿದ್ದು, ನಕಲಿ ಎಂದು ಪರಿಗಣಿಸಿ ದಂಡ ವಿಧಿಸಲಾಗಿದೆ.
ಹೊನ್ನಾಳಿ ಉಪ ವಿಭಾಗಾಧಿಕಾರಿ ಅಭಿಷೇಕ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಗಿರೀಶ್ ಸ್ಥಳ ಪರಿಶೀಲನೆ ನಡೆಸಿದ್ದು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಷಣ್ಮುಖಪ್ಪ ಸಮಗ್ರ ವರದಿಯೊಂದಿಗೆ ಕ್ರಮಕೈಗೊಳ್ಳಲು ಪ್ರಸ್ತಾವನೆ ಸಲ್ಲಿಸಿದ್ದಾರೆ.