
Bangladesh Plane Crash
Ashwaveega News 24×7 ಜು. 21:ಬಾಂಗ್ಲಾದೇಶದ ವಾಯುಪಡೆಯ ಎಫ್-7 ಬಿಜಿಐ ತರಬೇತಿ ಜೆಟ್ ಪತನಗೊಂಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಅವಘಡದಲ್ಲಿ ಪೈಲಟ್ ಸೇರಿ 16 ಜನ ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ. ಚೀನಾ ನಿರ್ಮಿತ ಎಫ್-7 ಜೆಟ್ ವಿಮಾನವು ಢಾಕಾದ ಉತ್ತರ ಪ್ರದೇಶದಲ್ಲಿರುವ ಮೈಲ್ಸ್ಟೋನ್ ಶಾಲೆ ಮತ್ತು ಕಾಲೇಜು ಕಟ್ಟಡಕ್ಕೆ ಅಪ್ಪಳಿಸಿತು. ರಕ್ಷಣಾ ಸಿಬ್ಬಂದಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುತ್ತಿದ್ದಾರೆ.
ಘಟನಾ ಸ್ಥಳದ ವಿಡಿಯೋ ಇದೀಗಾ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ವಿಡಿಯೋದಲ್ಲಿ ದಟ್ಟ ಹೊಗೆಯನ್ನು ಕಾಣಬಹುದು.
ಅಪಘಾತದ ಸ್ಥಳದಿಂದ ಬೆಂಕಿ ಮತ್ತು ಕಪ್ಪು ಹೊಗೆಯ ಚುಕ್ಕೆಗಳು ಬರುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಸುಟ್ಟ ಗಾಯಗಳಿಂದ ಮತ್ತು ತೀವ್ರ ರಕ್ತಸ್ರಾವದಿಂದ ಬಳಲುತ್ತಿರುವ ವಿದ್ಯಾರ್ಥಿಗಳು, ಅವ್ಯವಸ್ಥೆಯ ನಡುವೆ ದಿಕ್ಕಾಪಾಲಾಗಿ ಓಡುತ್ತಿರುವುದನ್ನು ದೃಶ್ಯಗಳು ಮನಕಲಕುವಂತಿದೆ.
ಆಂಬ್ಯುಲೆನ್ಸ್ಗಳು ತ್ವರಿತ ಗತಿಯಲ್ಲಿ ಲಭ್ಯವಾಗದ ಕಾರಣ, ಸೇನಾ ಸಿಬ್ಬಂದಿ ಗಾಯಗೊಂಡ ವಿದ್ಯಾರ್ಥಿಗಳನ್ನು ತಮ್ಮ ತೋಳುಗಳಲ್ಲಿ ರಕ್ಷಿಸಿ ರಿಕ್ಷಾ ವ್ಯಾನ್ಗಳು ಮತ್ತು ಇತರ ವಾಹನಗಳಲ್ಲಿ ಆಸ್ಪತ್ರೆಗಳಿಗೆ ಕರೆದೊಯ್ಯುತ್ತಿದ್ದಾರೆ.
ರಕ್ಷಣಾ ಕಾರ್ಯದಲ್ಲಿ ಬದುಕುಳಿದ ಕಾಲೇಜು ಉಪನ್ಯಾಸಕರು ಹಾಗೂ ಮಕ್ಕಳು ಸೇರಿದ್ದಾರೆ. ಸೇನೆ ಮತ್ತು ಅಗ್ನಿಶಾಮಕ ದಳದ ಅಧಿಕಾರಿಗಳು ಕಾರ್ಯಾಚರಣೆ ನಡೆಸುತ್ತಿದ್ದಾರೆ. ವಿಮಾನವು ಮೂರು ಅಂತಸ್ತಿನ ಶಾಲಾ ಕಟ್ಟಡದ ಮುಂಭಾಗಕ್ಕೆ ಅಪ್ಪಳಿಸಿದೆ. ವರದಿ ಪ್ರಕಾರ, 30 ಕ್ಕೂ ಹೆಚ್ಚು ಜನರನ್ನು ರಾಷ್ಟ್ರೀಯ ಸುಟ್ಟಗಾಯ ಮತ್ತು ಪ್ಲಾಸ್ಟಿಕ್ ಸರ್ಜರಿ ಸ್ಪೆಷಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ವರ್ಷ ಪತನಗೊಂಡ ಎರಡನೇ ಚೀನಾ ನಿರ್ಮಿತ ಎಫ್-7 ಇದಾಗಿದೆ. ಕಳೆದ ತಿಂಗಳು, ಮ್ಯಾನ್ಮಾರ್ ವಾಯುಪಡೆಯ ಎಫ್-7 ಫೈಟರ್ ಜೆಟ್ ಸಾಗೈಂಗ್ ಪ್ರದೇಶದಲ್ಲಿ ಪತನಗೊಂಡು ಪೈಲಟ್ ಸಾವನ್ನಪ್ಪಿದ್ದು, ಬೀಜಿಂಗ್ ಉತ್ಪಾದಿಸುವ ರಕ್ಷಣಾ ಉಪಕರಣಗಳ ಗುಣಮಟ್ಟದ ಬಗ್ಗೆ ಕಳವಳ ವ್ಯಕ್ತವಾಗಿತ್ತು.