
Ashwaveega News 24×7 ಸೆ. 22: ದಸರಾ ಉದ್ಘಾಟನೆಗೆ ಆಗಮಿಸಿದ್ದ ಬಾನು ಮುಷ್ತಾಕ್ ಚಾಮುಂಡಿ ತಾಯಿಯ ದರ್ಶನ ಪಡೆದು ಮಂಗಳಾರತಿ ಸ್ವೀಕರಿಸಿದರು. ಹಸಿರು ಬಾರ್ಡರ್ ಇರುವ ಹಳದಿ ಮೈಸೂರು ರೇಷ್ಮೆ ಸೀರೆ, ತಲೆಗೆ ಮೈಸೂರು ಮಲ್ಲಿಗೆ ಮುಡಿದು ಸಿಎಂ ಸಿದ್ದರಾಮಯ್ಯ, ಸಚಿವರ ಜೊತೆ ಬಾನು ಮುಷ್ತಾಕ್ ದೇವಸ್ಥಾನಕ್ಕೆ ಆಗಮಿಸಿದ್ದರು.
ಗರ್ಭಗುಡಿ ಮುಂಭಾಗದ ಆವರಣದಲ್ಲಿ ನಿಂತು ತಾಯಿ ಚಾಮುಂಡಿ ದರ್ಶನ ಪಡೆದರು. ನಂತರ ಗಣಪತಿಗೆ ಕೈ ಮುಗಿದು, ಮಂಗಳಾರತಿ ಪಡೆದು ಪ್ರಸಾದ ಸ್ವೀಕರಿಸಿದ್ರು. ಚಾಮುಂಡಿ ಬೆಟ್ಟಕ್ಕೆ ಬಾನು ಮುಷ್ತಾಕ್ ಅವರು ಇಡೀ ಕುಟುಂಬಸ್ಥರು ಹಾಜರಾಗಿದ್ದರು.
ಇನ್ನೂ, ನಾಡಹಬ್ಬ ಮೈಸೂರು ದಸರಾ ಉದ್ಘಾಟನೆ ವೇಳೆ ಲೇಖಕಿ ಬಾನು ಮುಷ್ತಾಕ್ ಭಾವುಕರಾದರು. ತಾಯಿ ಚಾಮುಂಡೇಶ್ವರಿ ಪೂಜೆ ವೇಳೆ ಬಾನು ಭಾವುಕರಾಗಿದ್ದು, ಕಣ್ಣಂಚಲಿ ಬಂದ ಕಣ್ಣೀರನ್ನು ಒರೆಸಿಕೊಂಡರು. ಈ ಹಿಂದೆ ಬಾನು ಮುಷ್ತಾಕ್ರಿಂದ ದಸರಾ ಉದ್ಘಾಟಿಸುವ ರಾಜ್ಯ ಸರ್ಕಾರದ ನಿರ್ಧಾರ ವಿರುದ್ಧ ಹಲವರಿಂದ ವಿರೋಧ ವ್ಯಕ್ತವಾಗಿತ್ತು.
ಇದೀಗ ಎಲ್ಲಾ ಅಡೆತಡೆಗಳನ್ನು ಎದುರಿಸಿ ಬಾನು ಮುಷ್ತಾಕ್ ನಾಡಹಬ್ಬ ಮೈಸೂರು ದಸರಾಗೆ ವಿದ್ಯುಕ್ತವಾಗಿ ಚಾಲನೆ ನೀಡಿದ್ದಾರೆ. ಅಲ್ಲದೇ ತಾಯಿ ಚಾಮುಂಡೇಶ್ವರಿಗೆ ಸಂಪ್ರದಾಯ ಬದ್ಧವಾಗಿ ಪೂಜೆ ಸಲ್ಲಿಸುವ ಮೂಲಕ ಟೀಕಾಕಾರರಿಗೆ ತಿರುಗೇಟು ನೀಡಿದ್ದಾರೆ.