
Ashwaveega News 24×7 ಸೆ. 16: ಆಸ್ತಿಗಾಗಿ ಹಣದ ವ್ಯಾಮೋಹಕ್ಕೆ ಬಿದ್ದ ಮಹಿಳೆಯೊಬ್ಬಳು ತನ್ನ ಮಲಮಗಳನ್ನೇ 3ನೇ ಮಹಡಿಯಿಂದ ತಳ್ಳಿ ಕೊಲೆ ಮಾಡಿದ ಅಮಾನವೀಯ ಘಟನೆ ನಗರದ ಆದರ್ಶ ಕಾಲೋನಿಯಲ್ಲಿ ನಡೆದಿದೆ. ಈ ಘಟನೆ ಆಗಸ್ಟ್ 27 ರಂದು ನಡೆದಿತ್ತಾದರೂ, ಅಕ್ಕಪಕ್ಕದ ಮನೆಯವರ ಸಿಸಿಟಿವಿ ದೃಶ್ಯಗಳು ಲಭ್ಯವಾದ ಬಳಿಕ ಕ್ರೂರ ಕೃತ್ಯ ತಡವಾಗಿ ಬೆಳಕಿಗೆ ಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಮಲತಾಯಿ ರಾಧಾಳನ್ನು ಬಂಧಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಮೃತ ಬಾಲಕಿ ಶಾನವಿ (7) ತಾಯಿ ಆರು ವರ್ಷಗಳ ಹಿಂದೆ ಅನಾರೋಗ್ಯದಿಂದ ಮೃತಪಟ್ಟಿದ್ದರು. ನಂತರ, ಶಾನವಿ ತಂದೆ ಸಿದ್ಧಾಂತ ಅವರು 2023ರಲ್ಲಿ ರಾಧಾಳನ್ನು ಎರಡನೇ ವಿವಾಹವಾಗಿದ್ದರು. ಈ ದಂಪತಿಗೆ ಇಬ್ಬರು ಅವಳಿ ಮಕ್ಕಳು ಜನಿಸಿದ್ದರು. ಇದರಿಂದ ಆಸ್ತಿ ಹಂಚಿಕೆಯಾಗಬಹುದೆಂಬ ಭಯದಿಂದ ರಾಧಾ, ಶಾನವಿಯನ್ನು ತನ್ನ ದಾರಿಯಿಂದ ತೆಗೆದುಹಾಕಲು ನಿರ್ಧರಿಸಿದ್ದಾಳೆ.
ಆಗಸ್ಟ್ 27 ರಂದು, ರಾಧಾ ಆಟ ಆಡಿಸುವ ನೆಪದಲ್ಲಿ ಶಾನವಿಯನ್ನು ಮನೆಯ 3ನೇ ಮಹಡಿಗೆ ಕರೆದೊಯ್ದಿದ್ದಾಳೆ. ಅಲ್ಲಿ, ಕುರ್ಚಿಯ ಮೇಲೆ ಅವಳನ್ನು ನಿಲ್ಲಿಸಿ, ನಂತರ ಯಾರಿಗೂ ಕಾಣದಂತೆ ತಳ್ಳಿ ಕೊಲೆ ಮಾಡಿದ್ದಾಳೆ. ಈ ಕೃತ್ಯದ ನಂತರ ಆಕೆ ಏನೂ ಆಗದಂತೆ ಮನೆಗೆ ಹಿಂತಿರುಗಿ ಮಲಗಿದ್ದಳು. ಮಗು ಮಹಡಿಯಿಂದ ಆಯತಪ್ಪಿ ಬಿದ್ದು ಸಾವನ್ನಪ್ಪಿದೆ ಎಂದು ಕುಟುಂಬಸ್ಥರು ನಂಬಿದ್ದರು. ಹಾಗಾಗಿ, ಮಗುವಿನ ತಂದೆ ಸಿದ್ಧಾಂತ ಆಗಸ್ಟ್ 28ರಂದು ಗಾಂಧಿ ಗಂಜ್ ಠಾಣೆಯಲ್ಲಿ ಆಕಸ್ಮಿಕ ಸಾವು ಎಂದು ದೂರು ನೀಡಿದ್ದರು.
ಸೆಪ್ಟೆಂಬರ್ 12ರಂದು ಪಕ್ಕದ ಮನೆಯ ಮಾಲೀಕರು ತಮ್ಮ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಭಯಾನಕ ಸತ್ಯ ಬಯಲಾಗಿದೆ. ಸಿಸಿಟಿವಿಯಲ್ಲಿ ರಾಧಾ ಸಂಶಯಾಸ್ಪದ ರೀತಿಯಲ್ಲಿ ಶಾನವಿ ಜೊತೆ ಮಹಡಿಯ ಮೇಲೆ ಓಡಾಡುವುದು, ನಂತರ ಅವಳನ್ನು ತಳ್ಳಿ ಅವಸರದಲ್ಲಿ ಮನೆ ಒಳಗೆ ಹೋಗುವುದು ಸ್ಪಷ್ಟವಾಗಿ ಸೆರೆಯಾಗಿದೆ. ಈ ದೃಶ್ಯಗಳನ್ನು ನೋಡಿದ ನೆರೆಮನೆಯವರು ತಕ್ಷಣ ಸಿದ್ಧಾಂತ ಅವರ ವಾಟ್ಸಾಪ್ಗೆ ಈ ವಿಡಿಯೋವನ್ನು ಕಳುಹಿಸಿದ್ದಾರೆ.
ಸಿಸಿಟಿವಿ ದೃಶ್ಯಗಳು ಕೇವಲ ಹತ್ಯೆಯ ಕ್ಷಣವನ್ನು ಮಾತ್ರ ತೋರಿಸಿಲ್ಲ. ಮೂರನೇ ಮಹಡಿಯಿಂದ ಕೆಳಗೆ ಬಿದ್ದರೂ ಬದುಕಿದ್ದ ಪುಟ್ಟ ಶಾನವಿ, ರಸ್ತೆಯ ಮೇಲೆ ನೋವಿನಿಂದ ಒದ್ದಾಡುತ್ತಿರುವ ಭಯಾನಕ ದೃಶ್ಯಗಳು ಕೂಡ ಸೆರೆಯಾಗಿವೆ. ನೆಲಕ್ಕೆ ಬಿದ್ದ ನಂತರವೂ, ಬಾಲಕಿ ಜೀವನ್ಮರಣದ ಹೋರಾಟ ನಡೆಸಿ, ಮೆಲ್ಲನೆ ನಡೆದುಕೊಂಡು ಬಂದು ರಸ್ತೆಯಲ್ಲಿ ಜೀವ ಬಿಟ್ಟಿದ್ದಾಳೆ. ಈ ದೃಶ್ಯಗಳನ್ನು ನೋಡಿದ ಸುತ್ತಮುತ್ತಲಿನ ಹಲವು ಜನರು ಆಕೆಯನ್ನು ರಕ್ಷಿಸಲು ಧಾವಿಸಿದ್ದರೂ, ಪ್ರಯೋಜನವಾಗಿಲ್ಲ.
ಸಿಸಿಟಿವಿ ದೃಶ್ಯಗಳ ಆಧಾರದ ಮೇಲೆ, ಮೃತ ಬಾಲಕಿಯ ಅಜ್ಜಿ ವಿಜಯಶ್ರೀ ಸುರೇಶ್ ಅವರು ಮಲತಾಯಿ ರಾಧಾ ವಿರುದ್ಧ ಗಾಂಧಿ ಗಂಜ್ ಪೊಲೀಸ್ ಠಾಣೆಯಲ್ಲಿ ಕೊಲೆ ದೂರು ದಾಖಲಿಸಿದ್ದಾರೆ. ಪೊಲೀಸರ ವಿಚಾರಣೆಯ ವೇಳೆ, ಆಸ್ತಿ ಇಬ್ಬಾಗ ಆಗುತ್ತೆ ಎಂಬ ಭಯದಿಂದ ಮಗುವನ್ನು ತಳ್ಳಿ ಕೊಲೆ ಮಾಡಿರುವುದಾಗಿ ರಾಧಾ ತಪ್ಪೊಪ್ಪಿಕೊಂಡಿದ್ದಾಳೆ ಎಂದು ತಿಳಿದುಬಂದಿದೆ.
ಸದ್ಯ, ಆರೋಪಿ ರಾಧಾ ನ್ಯಾಯಾಂಗ ಬಂಧನದಲ್ಲಿದ್ದಾಳೆ. ಈ ಅಮಾನವೀಯ ಕೃತ್ಯದಿಂದ ಇಡೀ ಬೀದರ್ ನಗರವೇ ಬೆಚ್ಚಿಬಿದ್ದಿದ್ದು, ಪಾಪಿ ಮಲತಾಯಿಗೆ ಅತಿ ಕಠಿಣ ಶಿಕ್ಷೆ ವಿಧಿಸಬೇಕೆಂದು ಕುಟುಂಬಸ್ಥರು ಹಾಗೂ ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.