Ashwaveega News 24×7 ಜನವರಿ 23 : ರಾಜ್ಯದಲ್ಲಿ ಬೈಕ್ ಟ್ಯಾಕ್ಸಿಗೆ ಮತ್ತೆ ಸಂಚಲನಕಾರಿ ಬೆಳವಣಿಗೆ ಸಿಕ್ಕಿದ್ದು, ಹೈಕೋರ್ಟ್ ಬೈಕ್ ಟ್ಯಾಕ್ಸಿ ನಿಷೇಧವನ್ನು ರದ್ದುಗೊಳಿಸಿ ಗ್ರೀನ್ಸಿಗ್ನಲ್ ನೀಡಿದೆ. ಇದರಿಂದ ಆಟೋ ಚಾಲಕರ ವಲಯದಲ್ಲಿ ಆತಂಕ ಮತ್ತು ಅಸಮಾಧಾನ ವ್ಯಕ್ತವಾಗುತ್ತಿದೆ.
ಹೈಕೋರ್ಟ್ ಆದೇಶದಂತೆ, ಕಂಡಕಂಡಲ್ಲಿ ಬೈಕ್ ಟ್ಯಾಕ್ಸಿ ಕುರಿತು ಪ್ರಶ್ನಿಸುವಂತಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಕಳೆದ ವರ್ಷ ಸರ್ಕಾರ ಜಾರಿಗೆ ತಂದಿದ್ದ ಬೈಕ್ ಟ್ಯಾಕ್ಸಿ ನಿಷೇಧಕ್ಕೆ ಇದೀಗ ನ್ಯಾಯಾಂಗದಿಂದ ಬ್ರೇಕ್ ಬಿದ್ದಿದೆ.
ಬೈಕ್ ಟ್ಯಾಕ್ಸಿ ನಿಷೇಧದ ವಿರುದ್ಧ ಬೈಕ್ ಟ್ಯಾಕ್ಸಿ ಅಗ್ರಿಗೇಟರ್ ಸಂಸ್ಥೆಗಳು ನ್ಯಾಯಾಲಯದ ಮೊರೆ ಹೋಗಿದ್ದವು. ಈ ಮೇಲ್ಮನವಿಯನ್ನು ವಿಚಾರಣೆ ನಡೆಸಿದ ಹೈಕೋರ್ಟ್, ಸುದೀರ್ಘ ವಾದ-ಪ್ರತಿವಾದಗಳ ನಂತರ ಬೈಕ್ ಟ್ಯಾಕ್ಸಿ ಸಂಸ್ಥೆಗಳಿಗೆ ರಿಲೀಫ್ ನೀಡಿದೆ.
ಈ ಪ್ರಕರಣದ ವಿಚಾರಣೆಯನ್ನು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಜೋಶಿ ಅವರಿದ್ದ ಪೀಠ ನಡೆಸಿದ್ದು, ಬೈಕ್ ಟ್ಯಾಕ್ಸಿ ಸಂಸ್ಥೆಗಳ ಮೇಲ್ಮನವಿಯನ್ನು ಪುರಸ್ಕರಿಸಿದೆ. ಹೈಕೋರ್ಟ್ ಆದೇಶದ ಪರಿಣಾಮವಾಗಿ ರಾಜ್ಯದಲ್ಲಿ ಬೈಕ್ ಟ್ಯಾಕ್ಸಿ ಸೇವೆಗಳಿಗೆ ಮತ್ತೆ ದಾರಿ ತೆರೆದಿದ್ದು, ಸಾರ್ವಜನಿಕ ಸಾರಿಗೆ ಕ್ಷೇತ್ರದಲ್ಲಿ ಮಹತ್ವದ ತಿರುವು ತಂದಿದೆ.
