Ashwaveega News 24×7 ಜನವರಿ 23 : ಧರ್ಮಸ್ಥಳ : ಬಿಗ್ಬಾಸ್ ಖ್ಯಾತಿಯ ಹಾಗೂ ಸಿನಿಮಾ ನಟ ಉಗ್ರಂ ಮಂಜು (ಮಂಜುನಾಥ್ ಗೌಡ) ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಶ್ರೀ ಕ್ಷೇತ್ರ ಧರ್ಮಸ್ಥಳದ ಶ್ರೀಮಂಜುನಾಥ ಸ್ವಾಮಿಯ ಸನ್ನಿಧಿಯಲ್ಲಿ ಮಂಜು ಅವರು ಸಾಯಿ ಸಂಧ್ಯಾ ಜೊತೆ ವೈವಾಹಿಕ ಜೀವನ ಆರಂಭಿಸಿದ್ದಾರೆ.
ಕುಟುಂಬಸ್ಥರು ಹಾಗೂ ಆಪ್ತರ ಸಮ್ಮುಖದಲ್ಲಿ ಸರಳವಾಗಿ ನಡೆದ ಈ ಮದುವೆ ಸಮಾರಂಭದಲ್ಲಿ ಭಕ್ತಿಭಾವದ ವಾತಾವರಣ ಮೆರಗುಗೊಳಿಸಿತು. ಬಿಗ್ಬಾಸ್ ಮೂಲಕ ಜನಪ್ರಿಯತೆ ಪಡೆದ ಉಗ್ರಂ ಮಂಜುಗೆ ಕಂಕಣ ಭಾಗ್ಯ ಕೂಡಿಬಂದಿದೆ ಎಂಬ ಸುದ್ದಿ ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ.
ಮಂಜುನಾಥ್ ಗೌಡ ಎಂದೇ ಮೂಲ ಹೆಸರು ಹೊಂದಿರುವ ಉಗ್ರಂ ಮಂಜು, ಕೋಲಾರ ಮೂಲದ ಸಿನಿಮಾ ನಟರಾಗಿದ್ದು, ತಮ್ಮ ವಿಭಿನ್ನ ಅಭಿನಯ ಶೈಲಿಯಿಂದ ಗಮನ ಸೆಳೆದವರು. ಇತ್ತ ವಧು ಸಾಯಿ ಸಂಧ್ಯಾ, ಬೆಂಗಳೂರಿನ ಸ್ಪರ್ಶ್ ಆಸ್ಪತ್ರೆಯಲ್ಲಿ ಉದ್ಯೋಗ ನಿರ್ವಹಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಉಗ್ರಂ ಮಂಜು ಅವರ ಮದುವೆಗೆ ಚಿತ್ರರಂಗದ ಸ್ನೇಹಿತರು, ಕುಟುಂಬ ಸದಸ್ಯರು ಹಾಗೂ ಆಪ್ತರು ಸಾಕ್ಷಿಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಮದುವೆಯ ಚಿತ್ರಗಳು ವೈರಲ್ ಆಗುತ್ತಿವೆ.
