ಬೆಳಗಾವಿ: ಯುವತಿಗೆ ಮಾನಸಿಕ ಹಾಗೂ ದೈಹಿಕ ಚಿತ್ರಹಿಂಸೆ ಕೊಟ್ಟು, ತನ್ನ ಪತಿ ಹಾಗೂ ಮನೆಯವರ ವಿರುದ್ಧ ಸುಳ್ಳು ಪ್ರಕರಣ ದಾಖಲಿಸುವಂತೆ ಪೀಡಿಸುತ್ತಿದ್ದ ಬೆಳಗಾವಿಯ ಸ್ವಯಂ ಘೋಷಿತ ಬಿಜೆಪಿ ಮುಖಂಡ ಪೃಥ್ವಿ ಸಿಂಗ್ ಎಂಬಾತನ ಮೇಲೆ ಪ್ರಕರಣ ದಾಖಲಾಗಿದೆ.
ಬೆಳಗಾವಿಯ ಖಡೇಬಜಾರ್ ಪೊಲೀಸ್ ಠಾಣೆಯಲ್ಲಿ ಪೃಥ್ವಿ ಸಿಂಗ್ ಹಾಗೂ ಆತನ ಪುತ್ರ ಜಸ್ವಿರ್ ಸಿಂಗ್ ವಿರುದ್ಧ ಪ್ರಕರಣ ದಾಖಲಾಗಿದ್ದು, “ನನ್ನ ಗಂಡನ ವಿರುದ್ಧ ಸುಳ್ಳು ಆರೋಪ ಮಾಡಿಸುವ ಉದ್ದೇಶದಿಂದ ನನಗೆ ವಿಷ ಕುಡಿಸಲಾಗಿತ್ತು,” ಎಂದು ಯುವತಿ ದೂರಿನಲ್ಲಿ ಉಲ್ಲೇಖ ಮಾಡಿದ್ದಾಳೆ.
ಯುವತಿ ಪ್ರಕಾರ, ಪೃಥ್ವಿ ಸಿಂಗ್ ತನ್ನನ್ನು ಗೃಹ ಬಂಧನದಲ್ಲಿ ಇರಿಸಿಕೊಂಡು, ಪತಿ ಹಾಗೂ ಮಾವನ ವಿರುದ್ಧ ದೂರು ನೀಡುವಂತೆ ಬಲವಂತಪಡಿಸುತ್ತಿದ್ದ. “ಬಿಜೆಪಿ ಮುಖಂಡನ ಹೆಸರಿನಲ್ಲಿ ಇಷ್ಟೆಲ್ಲಾ ಅವಾಂತರ ಸೃಷ್ಟಿ ಮಾಡುತ್ತಿರುವ ಪೃಥ್ವಿ ಸಿಂಗ್ ನಿಜಕ್ಕೂ ಪಕ್ಷದವರೇ ಅಥವಾ ಸಂಬಂಧವಿಲ್ಲದವನೇ ಎಂಬುದನ್ನು ಬಿಜೆಪಿ ಸ್ಪಷ್ಟಪಡಿಸಬೇಕಾಗಿದೆ,” ಎಂದು ಪ್ರಕರಣದ ಬಗ್ಗೆ ವಿವರಣೆ ನೀಡಿದೆ.
ಪ್ರಕರಣದ ಮೂಲ: ಈ ಹಿಂದಿನ ಪ್ರಕರಣದಲ್ಲಿ, ಯುವತಿ ತನ್ನ ಪತಿ ಮತ್ತು ಮಾವನ ವಿರುದ್ಧ ಕಿರುಕುಳ ಹಾಗೂ ಲೈಂಗಿಕ ದೌರ್ಜನ್ಯದ ಆರೋಪ ಮಾಡಿ ವಿಷ ಸೇವಿಸಿ ಆಸ್ಪತ್ರೆಗೆ ದಾಖಲಾಗಿದ್ದಳು. ಆದರೆ, ಈಗ ತನಗೆ ಆಶ್ರಯ ನೀಡಿದ ಪೃಥ್ವಿ ಸಿಂಗ್ ಇಷ್ಟೆಲ್ಲಾ ಘಟನೆಗೆ ಕಾರಣ ಎಂದು ದೂರಿನಲ್ಲಿ ಉಲ್ಲೇಖ ಮಾಡಿದ್ದಾಳೆ.