Ashwaveega News 24×7 ಏಪ್ರಿಲ್ 4– 2026 : ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯಲ್ಲಿ ಹೃದಯ ವಿದ್ರಾವಕ ದುರಂತ ಸಂಭವಿಸಿದ್ದು, ಬಾವಿಗೆ ಕಾರ್ ಬಿದ್ದ ಪರಿಣಾಮ ಒಂದೇ ಕುಟುಂಬದ 9 ಮಂದಿ ಜಲಸಮಾಧಿಯಾಗಿದ್ದಾರೆ.
ನಿನ್ನೆ ರಾತ್ರಿ ಸುಮಾರು 10 ಗಂಟೆ ಸುಮಾರಿಗೆ ಈ ದುರಂತ ಸಂಭವಿಸಿದೆ. ಕುಟುಂಬದವರು ಫಂಕ್ಷನ್ ಮುಗಿಸಿ ವಾಪಸ್ ಮನೆಗೆ ತೆರಳುತ್ತಿದ್ದಾಗ ಕಾರ್ ನಿಯಂತ್ರಣ ತಪ್ಪಿ ರಸ್ತೆ ಬದಿಯ ಬಾವಿಗೆ ಬಿದ್ದಿದೆ ಎಂದು ಪ್ರಾಥಮಿಕ ಮಾಹಿತಿ ತಿಳಿದುಬಂದಿದೆ .
ದುರಂತದಲ್ಲಿ ಮೃತಪಟ್ಟವರಲ್ಲಿ ಒಟ್ಟು 9 ಮಂದಿ ಇದ್ದು, ಅವರಲ್ಲಿ 6 ಮಕ್ಕಳು ಸೇರಿರುವುದು ಪ್ರಕರಣವನ್ನು ಇನ್ನಷ್ಟು ದುಃಖಕರವಾಗಿಸಿದೆ. ಸ್ಥಳೀಯರು ತಕ್ಷಣ ರಕ್ಷಣಾ ಕಾರ್ಯಕ್ಕೆ ಮುಂದಾದರೂ, ಕಾರ್ ಸಂಪೂರ್ಣವಾಗಿ ನೀರಿನಲ್ಲಿ ಮುಳುಗಿದ್ದರಿಂದ ಯಾರನ್ನೂ ಜೀವಂತವಾಗಿ ರಕ್ಷಿಸಲು ಸಾಧ್ಯವಾಗಲಿಲ್ಲ .

ಮಧ್ಯರಾತ್ರಿ ವೇಳೆಗೆ ಕ್ರೇನ್ ಸಹಾಯದಿಂದ ಕಾರ್ ಅನ್ನು ಹೊರತೆಗೆದು ಶವಗಳನ್ನು ಮೇಲಕ್ಕೆತ್ತಲಾಗಿದೆ. ಘಟನೆ ಸ್ಥಳದಲ್ಲಿ ಕಣ್ಣೀರಿನ ವಾತಾವರಣ ನಿರ್ಮಾಣವಾಗಿದ್ದು, ಕುಟುಂಬದವರ ಆಕ್ರಂದನ ಎಲ್ಲರ ಮನಕಲಕುವಂತಿದೆ.
ಈ ದುರಂತ ಆಕಸ್ಮಿಕವಾಗಿದೆಯೋ ಅಥವಾ ಬೇರೆ ಯಾವುದೇ ಕಾರಣಗಳಿದೆಯೋ ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ರಸ್ತೆ ಪರಿಸ್ಥಿತಿ, ಚಾಲಕನ ನಿಯಂತ್ರಣ ತಪ್ಪಿದ ಕಾರಣ, ಅಥವಾ ಬೇರೆ ತಾಂತ್ರಿಕ ದೋಷಗಳ ಬಗ್ಗೆ ಪರಿಶೀಲನೆ ನಡೆಯುತ್ತಿದೆ.
