
many bridges and temples in chikkodi are flooded
ಮಹಾರಾಷ್ಟ್ರದ ಪಶ್ಚಿಮ ಘಟ್ಟದಲ್ಲಿ ಧಾರಾಕಾರ ಮಳೆಯಾಗುತ್ತಿದ್ದು ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಹಲವು ಕೆಳ ಭಾಗದ ಸೇತುವೆಗಳು ಜಲಾವೃತವಾಗಿವೆ. ಮಹಾರಾಷ್ಟ್ರದ ರಾಜಾಪುರ ಬ್ಯಾರೇಜ್ನಿಂದ ಕೃಷ್ಣಾ ನದಿಗೆ 84,500 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ನದಿಯಲ್ಲಿ ನೀರಿನ ಮಟ್ಟ ಹೆಚ್ಚಳವಾಗಿದ್ದು, ಕೃಷ್ಣಾ ನದಿ ಮೈದುಂಬಿ ಹರಿಯುತ್ತಿದೆ.
ಮತ್ತೊಂದೆಡೆ ವೇದಗಂಗಾ ನದಿಯಲ್ಲಿ ಒಳಹರಿವು ಹೆಚ್ಚಳವಾಗಿ ನಿಪ್ಪಾಣಿ ತಾಲೂಕಿನ ಜತ್ರಾಟ-ಭೀವಶಿ ಸೇತುವೆ ಮುಳುಗಡೆಯಾಗಿದ್ದು, ಮುಂಜಾಗ್ರತಾ ಕ್ರಮವಾಗಿ ನಿಪ್ಪಾಣಿ ಪೊಲೀಸರು ರಸ್ತೆಗೆ ಬ್ಯಾರಿಕೇಡ್ ಅಳವಡಿಸಿ ವಾಹನ ಸಂಚಾರ ನಿರ್ಬಂಧಿಸಿದ್ದಾರೆ. ಮತ್ತೊಂದೆಡೆ ಕಾಗವಾಡ ಮಾರ್ಗವಾಗಿ ರಾಜಾಪುರದಿಂದ ಮಂಗಾವತಿಗೆ ಸಂಪರ್ಕ ಕಲ್ಪಿಸುವ ರಸ್ತೆ ಕೃಷ್ಣಾ ನದಿಯಲ್ಲಿ ನೀರಿನ ಮಟ್ಟ ಏರಿಕೆಯಿಂದ ರಸ್ತೆ ಜಲಾವೃತವಾಗಿದ್ದು, ಆ ಮಾರ್ಗವನ್ನು ಪೊಲೀಸರು ಬಂದ್ ಮಾಡಿದ್ದಾರೆ.
ಪ್ರಮುಖವಾಗಿ ಕರ್ನಾಟಕ ಮತ್ತು ಮಹಾರಾಷ್ಟ್ರದ ಗಡಿಯಲ್ಲಿ ಇರುವ ಕೊಲ್ಲಾಪುರ ಜಿಲ್ಲೆಯ ಶಿರೋಳ ತಾಲೂಕಿನ ನರಸಿಂಹವಾಡಿ ದತ್ತ ಮಂದಿರ ಹಾಗೂ ಚಿಕ್ಕೋಡಿ ತಾಲೂಕಿನ ಮಾಂಜರಿ ಗ್ರಾಮದ ದತ್ತ ಮಂದಿರಕ್ಕೆ ಜಲ ದಿಗ್ಬಂಧನ ಹಾಕಿದೆ. ಕೃಷ್ಣಾ, ದೂದಗಂಗಾ, ವೇದಗಂಗಾ ಹಾಗೂ ಹೀರಣ್ಯಕೇಶಿ ನದಿಗಳು ಉಕ್ಕಿ ಹರಿಯುತ್ತಿದ್ದು, ಕೃಷ್ಣಾ ನದಿಯ ಹಿಪ್ಪರಗಿ ಬ್ಯಾರೇಜ್ನಲ್ಲಿ1,85,000 ಸಾವಿರ ಕ್ಯೂಸೆಕ್ ಒಳಹರಿವು ಹೆಚ್ಚಿದೆ.
ಚಿಕ್ಕೋಡಿ ಉಪ ವಿಭಾಗ ವ್ಯಾಪ್ತಿಯ ಕೆಳಹಂತದ 11 ಸೇತುವೆಗಳು ಜಲಾವೃತವಾಗಿವೆ. ಇವು ಕೃಷ್ಣಾ, ದೂದಗಂಗಾ ಹಾಗೂ ವೇದಗಂಗಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆಗಳಾಗಿವೆ. ಕೃಷ್ಣಾ ನದಿಗೆ ಅಡ್ಡಲಾಗಿರುವ ಯಡೂರು – ಕಲ್ಲೋಳ, ಭಾವನಸೌಂದತ್ತಿ – ಮಾಂಜರಿ, ದೂದಗಂಗಾ ನದಿಯ ಮಲ್ಲಿಕವಾಡ – ದತ್ತವಾಡ, ಕಾರದಗಾ – ಭೋಜ, ಭೋಜವಾಡಿ – ಕಾರದಗಾ, ಯಕ್ಸಂಬಾ- ದತ್ತವಾಡ. ವೇದಗಂಗಾ ನದಿಯ ಅಕ್ಕೋಳ – ಸಿದ್ನಾಳ, ಜತ್ರಾಟ – ಭೀವಶಿ, ಭಾರವಾಡ – ಕುನ್ನೂರು, ಬೋಜವಾಡಿ – ಕುನ್ನೂರು. ಹೀರಣ್ಯಕೇಶಿ ನದಿಗೆ ಅಡ್ಡಲಾಗಿರುವ ಮದಮಕ್ಕನಾಳ – ಯರನಾಳ ಸೇತುವೆ ಮುಳುಗಡೆಯಾಗಿವೆ.
ನಿಪ್ಪಾಣಿ ತಾಲೂಕಿನ ಕಾರದಗಾ ಗ್ರಾಮದ ಬಂಗಾಲಿ ಬಾಬಾ ದುರ್ಗಾವನ್ನು ದೂದಗಂಗಾ ನದಿ ನೀರು ಸೂತ್ತುವರಿದಿದ್ದು, ಗ್ರಾಮಸ್ಥರು ದೂರದಿಂದಲೇ ದೇವರ ದರ್ಶನ ಪಡೆಯುತ್ತಿದ್ದಾರೆ.