
chikkodi farmer farming activities on an electric bike karnataka
Ashwaveega News 24×7 ಜು. 22: ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕಬ್ಬೂರ ಪಟ್ಟಣದ ರೈತರೊಬ್ಬರು ಎಲೆಕ್ಟ್ರಿಕ್ ಬೈಕ್ನಿಂದ ಅತಿ ಕಡಿಮೆ ವೆಚ್ಚದಲ್ಲಿ ಜಮೀನಿನಲ್ಲಿ ಕುಂಟೆ (ಎಡೆ) ಹೊಡೆಯುವ ಮೂಲಕ ಗಮನ ಸೆಳೆಯುತ್ತಿದ್ದಾರೆ.
ಹೌದು, ಅಜಿತ್ ಭೀಮಪ್ಪ ನಿಡಗುಂದಿ ಎಂಬ ರೈತ ಟೆಕ್ನಾಲಜಿ ಬಳಸಿಕೊಂಡು ಜಮೀನಿನಲ್ಲಿ ವಿದ್ಯುತ್ ಚಾಲಿತ ದ್ವಿಚಕ್ರ ವಾಹನ ಬಳಸಿಕೊಂಡು ಉಳುಮೆ ಮಾಡುವ ಈ ವಿನೂತನ ಪ್ರಯೋಗದಲ್ಲಿ ಅವರು ಯಶಸ್ಸು ಕಂಡಿದ್ದಾರೆ.
ತಮ್ಮ ಐದು ಎಕರೆ ಪ್ರದೇಶದಲ್ಲಿ ಸೋಯಾಬೀನ್ ಬೆಳೆದಿರುವ ರೈತ ಅಜಿತ್, ಎತ್ತುಗಳಿಂದ ಎಡೆ ಹೊಡೆಯುವ ಬದಲು ವಿದ್ಯುತ್ ಚಾಲಿತ ದ್ವಿಚಕ್ರ ವಾಹನ ಬಳಕೆ ಮಾಡಿಕೊಂಡು ಕೃಷಿ ಕಾಯಕ ಮುಂದುವರೆಸಿದ್ದಾರೆ. ”ಸುಮಾರು 30 ಎಕರೆ ಜಮೀನು ಇದ್ದು, ಇತ್ತೀಚಿನ ದಿನಗಳಲ್ಲಿ ರೈತರಿಗೆ ಸಕಾಲಕ್ಕೆ ಎತ್ತುಗಳು ಸಿಗದೇ ಇರುವುದರಿಂದ ಈ ಹೊಸ ಸಾಹಸಕ್ಕೆ ಕೈ ಹಾಕಬೇಕಾಯಿತು” ಎಂದು ಅವರು ಹೇಳಿಕೊಂಡಿದ್ದಾರೆ.
ಕೇವಲ ಎತ್ತುಗಳು ಅಷ್ಟೇ ಅಲ್ಲದೇ ಸಕಾಲದಲ್ಲಿ ಕೃಷಿ ಕಾರ್ಮಿಕರು ಕೂಡ ಸಿಗುತ್ತಿಲ್ಲ. ಎತ್ತು ಹಾಗೂ ಕಾರ್ಮಿಕರ ಲಭ್ಯತೆ ಇಲ್ಲದ್ದಕ್ಕೆ ಹೀಗೆ ಬೆಳೆಯನ್ನು ಆರೈಕೆ ಮಾಡುತ್ತಿದ್ದೇವೆ. ಕಬ್ಬೂರ ಪಟ್ಟಣದಿಂದ 2 ಕಿ.ಮೀ ದೂರದಲ್ಲಿ ನಮ್ಮದು 30 ಎಕರೆ ಜಮೀನಿದೆ. ಅದರಲ್ಲಿ ವಿವಿಧ ಬೆಳೆಗಳನ್ನು ಬೆಳೆಯುತ್ತೇವೆ.
ಆದರೆ, ಸರಿಯಾದ ವೇಳೆಗೆ ಕೂಲಿ ಕಾರ್ಮಿಕರು ಬಾರದ ಕಾರಣ ಕಳೆ ಕೀಳಲಾಗದ ಸ್ಥಿತಿ ಇದೆ. ಕುಂಟೆ ಹೊಡೆಯಲು ಎತ್ತುಗಳು ಕೂಡ ನಮ್ಮಲ್ಲಿ ಸಿಗುತ್ತಿಲ್ಲ. ಹೀಗಾಗಿ ಕೃಷಿ ಇಲಾಖೆ ನೀಡಿದ ಹೊಸ ಮಾದರಿಯ ಕುಂಟೆಯನ್ನು ನಮ್ಮ ವಿದ್ಯುತ್ ಚಾಲಿತ ದ್ವಿಚಕ್ರ ವಾಹನಕ್ಕೆ ಹಿಂದೆ ಕಟ್ಟಿಕೊಂಡು ಸೋಯಾಬೀನ್ ಬೆಳೆಯ ಕುಂಟೆ ಹೊಡೆಯುತ್ತಿದ್ದೇವೆ ಎಂದಿದ್ದಾರೆ.