Ashwaveega News 24×7 ಏಪ್ರಿಲ್ 4– 2026 : ಬೆಂಗಳೂರು : ಕನ್ನಡ ಚಿತ್ರರಂಗದಲ್ಲಿ ಹೊಸ ಪ್ರಯೋಗಗಳಿಗೆ ಹೆಸರಾಗಿರುವ ಡಾಲಿ ಧನಂಜಯ್ ಇದೀಗ ಮತ್ತೊಂದು ವಿಭಿನ್ನ ಕಥೆಯೊಂದಿಗೆ ಪ್ರೇಕ್ಷಕರ ಮುಂದೆ ಬರಲು ಸಿದ್ಧರಾಗಿದ್ದಾರೆ. ‘ಮದರ್ ಪ್ರಾಮಿಸ್’ ಎಂಬ ಹೊಸ ಸಿನಿಮಾವನ್ನು ಘೋಷಣೆ ಮಾಡಿರುವ ಅವರು, ಈ ಬಾರಿ ಪಕ್ಕಾ ಕನ್ನಡದ ಪ್ಯಾನ್ ಎಮೋಷನಲ್ ಕಥೆಯನ್ನು ತೆರೆ ಮೇಲೆ ತರಲು ಮುಂದಾಗಿದ್ದಾರೆ.
‘ಬಡವ ರಾಸ್ಕಲ್’ ಚಿತ್ರದ ನಂತರ ಮತ್ತೆ ತಮ್ಮ ಸ್ನೇಹಿತರ ಬಳಗದ ಜೊತೆಗೂಡಿ ಸಿನಿಮಾ ಮಾಡುತ್ತಿರುವ ಡಾಲಿ, ಈ ಬಾರಿ ಕೂಡ ಹೊಸ ಪ್ರಯೋಗಕ್ಕೆ ಕೈ ಹಾಕಿದ್ದಾರೆ. ಇತ್ತೀಚಿಗಷ್ಟೇ ‘ಹೆಗ್ಗಣ ಮುದ್ದು’ ಸಿನಿಮಾವನ್ನು ಅನೌನ್ಸ್ ಮಾಡಿದ್ದ ಅವರು, ಇದೀಗ ಮತ್ತೊಂದು ಹೊಸ ಪ್ರಾಜೆಕ್ಟ್ ಮೂಲಕ ಸರ್ಪ್ರೈಸ್ ನೀಡಿದ್ದಾರೆ.

ಕಳೆದ ಕೆಲವು ದಿನಗಳಿಂದ ಸಿನಿಮಾದ ಟೈಟಲ್ ಬಗ್ಗೆ ಕುತೂಹಲ ಮೂಡಿಸಿದ್ದ ಚಿತ್ರತಂಡ, ಪ್ರೇಕ್ಷಕರಿಗೆ “ಟೈಟಲ್ ಗೆಸ್ ಮಾಡಿ” ಎಂಬ ಸವಾಲು ನೀಡಿತ್ತು. ಯಾರ ಮುಖವನ್ನೂ ತೋರಿಸದ ಪೋಸ್ಟರ್ ಬಿಡುಗಡೆ ಮಾಡಿ, ಎಲ್ಲಾ ಕಲಾವಿದರನ್ನು ಕ್ಯಾಮೆರಾ ಕಡೆಗೆ ಹಿಮ್ಮುಖವಾಗಿ ನಿಲ್ಲಿಸಿದ್ದ ಸ್ಟೈಲ್ ಕೂಡ ಗಮನ ಸೆಳೆದಿತ್ತು. ಈಗ ಅಂತಿಮವಾಗಿ ಸಿನಿಮಾದ ಟೈಟಲ್ ‘ಮದರ್ ಪ್ರಾಮಿಸ್’ ಎಂದು ರಿವೀಲ್ ಮಾಡುವ ಜೊತೆಗೆ, ಪ್ರಮುಖ ಪಾತ್ರಧಾರಿಗಳ ಮುಖಗಳನ್ನೂ ಬಹಿರಂಗಪಡಿಸಲಾಗಿದೆ .
ಈ ಚಿತ್ರವನ್ನು ಡಾಲಿ ಸ್ನೇಹಿತ ಪೂರ್ಣ ಮೈಸೂರು ನಿರ್ದೇಶನ ಮಾಡುತ್ತಿದ್ದು, ಡಾಲಿ ಪಿಕ್ಚರ್ಸ್ ಸಹಯೋಗದಲ್ಲಿ ನಿರ್ಮಾಣವಾಗುತ್ತಿದೆ. ಡಾಲಿಯ ಇನ್ನೊಬ್ಬ ಗೆಳೆಯ ಹರ್ಷ ಮುರುಂಡಿ ಶಿವಲಿಂಗಪ್ಪ ಈ ಚಿತ್ರದ ಮೂಲಕ ನಿರ್ಮಾಪಕರಾಗಿ ಸಿನಿಮಾ ರಂಗಕ್ಕೆ ಕಾಲಿಡುತ್ತಿದ್ದಾರೆ.

‘ಮದರ್ ಪ್ರಾಮಿಸ್’ ಸಿನಿಮಾ ಎಮೋಷನಲ್, ಕಾಮಿಡಿ ಮತ್ತು ಥ್ರಿಲ್ ಮಿಶ್ರಣವಾಗಿರುವ ಕಥೆಯನ್ನು ಹೊಂದಿದ್ದು, ಪ್ರೇಕ್ಷಕರಿಗೆ ವಿಭಿನ್ನ ಅನುಭವ ನೀಡುವ ನಿರೀಕ್ಷೆಯಿದೆ. ಚಿತ್ರದಲ್ಲಿ ಡಾಲಿ ಧನಂಜಯ್ ಜೊತೆಗೆ ನಾಗಭೂಷಣ್, ವಿನಯ ಪ್ರಸಾದ್, ಗೀತಾ, ಗುರುದತ್ ಸೇರಿದಂತೆ ಅನೇಕರು ಅಭಿನಯಿಸಿದ್ದಾರೆ.
ಫಸ್ಟ್ ಲುಕ್ ಪೋಸ್ಟರ್ನಲ್ಲಿಯೇ 36 ಪ್ರಮುಖ ಕಲಾವಿದರನ್ನು ಪರಿಚಯಿಸಿರುವ ಚಿತ್ರತಂಡ, ಒಳ್ಳೆಯ ಕಂಟೆಂಟ್ ಜೊತೆಗೆ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ.
ಇನ್ನೂ ಚಿತ್ರಕ್ಕೆ ಶಶಾಂಕ್ ಕ್ರಿಯೇಟಿವ್ ಡೈರೆಕ್ಟರ್ ಆಗಿ ಕೆಲಸ ಮಾಡಿದ್ದು, ಛಾಯಾಗ್ರಹಣವನ್ನು ರಾಹುಲ್ ರಾಯ್ ನಿರ್ವಹಿಸಿದ್ದಾರೆ. ಸಂಗೀತವನ್ನು ನವನೀತ್ ಶ್ಯಾಮ್ ನೀಡಿದ್ದಾರೆ.
