
Ashwaveega News 24×7 ಸೆ. 20: ಭಾರೀ ಮಳೆಯಿಂದ ಅತಿವೃಷ್ಟಿಯಿಂದಾಗಿ ತತ್ತರಿಸಿದ್ದ ರಾಜ್ಯದ ರೈತರಿಗೆ ಕೇಂದ್ರ ಸರ್ಕಾರ ಗುಡ್ನ್ಯೂಸ್ ನೀಡಿದೆ. ನವರಾತ್ರಿ ಕೊಡುಗೆಯಾಗಿ ಬೆಂಬಲ ಬೆಲೆಯಲ್ಲಿ ಐದು ಧಾನ್ಯಗಳ ಖರೀದಿಗೆ ಅನುಮತಿ ನೀಡಿದೆ.
2025-26ನೇ ಸಾಲಿನ ಮುಂಗಾರಿನಲ್ಲಿ ಬೆಳೆದ ಹೆಸರು ಕಾಳು, ಉದ್ದಿನ ಕಾಳು, ನೆಲಗಡಲೆ (ಶೇಂಗಾ), ಸೋಯಾಬಿನ್ ಮತ್ತು ಸೂರ್ಯಕಾಂತಿ ಧಾನ್ಯಗಳನ್ನು ಕೇಂದ್ರದ ಬೆಂಬಲ ಬೆಲೆಯಲ್ಲಿ ಖರೀದಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ಈ ಕುರಿತು ಕೇಂದ್ರ ಕೃಷಿ ಸಚಿವರು, ಆಹಾರ ಸಚಿವ ಪ್ರಲ್ಹಾದ್ ಜೋಶಿ ಅವರಿಗೆ ಖುದ್ದು ಪತ್ರ ಬರೆದು ಮಾಹಿತಿ ನೀಡಿದ್ದಾರೆ.
ಪ್ರಸಕ್ತ ಮುಂಗಾರಿನಲ್ಲಿ ಕರ್ನಾಟಕದ ಬೆಳೆಗಾರರು ಅತಿವೃಷ್ಟಿಯಿಂದಾಗಿ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ ಹೆಸರು, ಉದ್ದು, ಶೇಂಗಾ, ಸೋಯಾಬಿನ್ ಹಾಗೂ ಸೂರ್ಯಕಾಂತಿ ಧಾನ್ಯಗಳನ್ನು ಬೆಂಬಲ ಬೆಲೆಯಲ್ಲಿ ಖರೀದಿಗೆ ನೆರವಾಗುವಂತೆ ಕೋರಿ ಸಚಿವ ಪ್ರಲ್ಹಾದ್ ಜೋಶಿ ಅವರು ಪ್ರಧಾನಿ ಮೋದಿ ಮತ್ತು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಪತ್ರ ಬರೆದಿದ್ದರು.
ಪ್ರಲ್ಹಾದ್ ಜೋಶಿ ಮನವಿಗೆ ಸ್ಪಂದಿಸಿದ ಮೋದಿ, ತಕ್ಷಣವೇ ರೈತರ ನೆರವಿಗೆ ಮುಂದಾಗುವಂತೆ ತಿಳಿಸಿದ್ದರು. ಅಂತೆಯೇ ಕೇಂದ್ರ ಕೃಷಿ ಸಚಿವ ಶಿವರಾಜ್ಸಿಂಗ್ ಚೌಹಾಣ್ ಅವರು ತಮ್ಮ ಮನವಿಗೆ ತ್ವರಿತ ಸ್ಪಂದನೆ ನೀಡಿ, ರಾಜ್ಯದ ರೈತರ ನೆರವಿಗೆ ಧಾವಿಸಿದ್ದಾರೆ.
ಈ ಬೆಳೆಗಾರರ ಹಿತದೃಷ್ಟಿಯಿಂದ ಬೆಂಬಲ ಬೆಲೆಯಲ್ಲಿ ಆಹಾರ ಧಾನ್ಯ ಖರೀದಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ಸಹ ನೀಡಿದ್ದಾರೆ.