
Ashwaveega News 24×7 ಅಕ್ಟೋಬರ್. 07: ಸನಾತನದ ಧರ್ಮ ರಕ್ಷಣೆ ಬಗ್ಗೆ ಅರುಚುತ್ತಾ ಕೋರ್ಟ್ ಕಲಾಪದಲ್ಲೇ ವಕೀಲರೊಬ್ಬರಿಂದ ಸಿಜೆಐ ಮೇಲೆ ದಾಳಿ ನಡೆದಿರುವುದು ಅತ್ಯಂತ ಆತಂಕಕಾರಿ ದುರ್ಘಟನೆಯಾಗಿದ್ದು, ಕೋಮು ಆಸಹನೆಯ ಪರಾಕಾಷ್ಠೆಗೆ ಸಾಕ್ಷಿ ಒದಗಿಸಿದೆ ಎಂದು ದಲಿತ ಸೇನೆ ಖಂಡನೆ ವ್ಯಕ್ತಪಡಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘಟನಾ ಕಾರ್ಯದರ್ಶಿ ಜಾವೀದ್ ಖಾನ್, ದೇಶದ ಅತ್ಯುನ್ನತ ನ್ಯಾಯಾಂಗ ಸಂಸ್ಥೆಯಾಗಿರುವ ಸುಪ್ರೀಂಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಸ್ಥಾನದಲ್ಲಿ ಪರಿಶಿಷ್ಟ ಜಾತಿ ಸಮುದಾಯದ ವ್ಯಕ್ತಿ ಒಬ್ಬರು ಕುಳಿತಿರುವುದು ಈ ಸನಾತನ ಧರ್ಮ ರಕ್ಷಕರ ಆಸಹನೆಗೆ ಕಾರಣವಾಗಿರುವಂತಹದ್ದು.
ನರೇಂದ್ರ ಮೋದಿ ಅಧಿಕಾರದ ರಕ್ಷಣೆಯಲ್ಲಿ ದೇಶದಾದ್ಯಂತ ಪ್ರತಿ ದಿನವೂ ವರದಿಯಾಗುತ್ತಿರುವ ಕೋಮು ಮನಸ್ಥಿತಿಯ ಅಸಹನೆಗಳು ಈಗ ಕೋರ್ಟ್ ಕಲಾಪವನ್ನು ಪ್ರವೇಶಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.
ಅತ್ಯುನ್ನತ ನ್ಯಾಯಾಂಗದ ಸಂಸ್ಥೆಯ ಕಲಾಪದಲ್ಲಿ, ಅದೂ ಒಬ್ಬ ಹಿರಿಯ ವಕೀಲರ ಇಂತಹ ಅನುಚಿತ, ಅಕ್ಷಮ್ಯ ದುರ್ವರ್ತನೆಯು ನಮ್ಮ ಘನ ಸಂವಿಧಾನದ ಮೇಲೆ ನಡೆದಿರುವ ನೇರ ಧಾಳಿಯಾಗಿದೆ. ಇಂತಹ ಅನಿರೀಕ್ಷಿತ ದಾಳಿಯನ್ನು ಗರಿಷ್ಠ ಸಂಯಮದಿಂದ ನಿಭಾಯಿಸಿರುವ ಮುಖ್ಯ ನ್ಯಾಯಮೂರ್ತಿ ನಡೆ ಅಭಿನಂದನಾರ್ಹವಾಗಿದ್ದು. ಎಲ್ಲ ಪ್ರಜಾಪ್ರಭುತ್ವ ಹಾಗೂ ಸಂವಿಧಾನ ಪ್ರೇಮಿಗಳು ಈ ಮತೀಯ ಮನಸ್ಥಿತಿಯ ಹೀನ ಕೃತ್ಯವನ್ನು ಹಾಗೂ ಹೀನ ಕೃತ್ಯ ಎಸಗಿದ ವ್ಯಕ್ತಿ ಪರವಾಗಿ ಸಹಾನುಭೂತಿ ಮೂಡಿಸುವ ಫ್ಯಾಸಿಸ್ಟ್ ಶಕ್ತಿಗಳ ಪ್ರಚಾರಾಂದೋಲನ ವನ್ನು ತೀವ್ರವಾಗಿ ಖಂಡಿಸಬೇಕು ಮತ್ತು ಪ್ರತಿಭಟಿಸಬೇಕು ಎಂದು ಜಾವೀದ್ ಖಾನ್ ಕರೆ ನೀಡಿದ್ದಾರೆ.