Ashwaveega News 24×7 ಫೆಬ್ರವರಿ 14 -2026 – ಬೆಂಗಳೂರು : ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ಜೋ ಸೈಮನ್ ಅವರು ವಿಧಿವಶರಾಗಿದ್ದಾರೆ. ಅವರ ನಿಧನದಿಂದ ಕನ್ನಡ ಚಿತ್ರರಂಗದಲ್ಲಿ ದುಃಖದ ವಾತಾವರಣ ನಿರ್ಮಾಣವಾಗಿದೆ. ಹಲವು ದಶಕಗಳಿಂದ ಚಿತ್ರರಂಗದಲ್ಲಿ ಸೇವೆ ಸಲ್ಲಿಸಿದ್ದ ಜೋ ಸೈಮನ್ ಅವರು ಅನೇಕ ಕಲಾವಿದರಿಗೆ ಮಾರ್ಗದರ್ಶಕರಾಗಿದ್ದರು.
ಅವರ ಪಾರ್ಥಿವ ಶರೀರವನ್ನು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಸಂಸ ರಂಗಮಂದಿರದಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಇರಿಸಲಾಗಿತ್ತು. ಕುಟುಂಬಸ್ಥರು, ಸ್ನೇಹಿತರು ಹಾಗೂ ಚಿತ್ರರಂಗದ ಗಣ್ಯರು ಆಗಮಿಸಿ ಅಂತಿಮ ನಮನ ಸಲ್ಲಿಸಿದರು. ಪಾರ್ಥಿವ ಶರೀರದ ಮುಂದೆ ಕುಟುಂಬಸ್ಥರ ಗೋಳಾಟ ಮನಕಲುಕುವಂತಿತ್ತು.
ನಟ ಹಾಗೂ ಸಂಗೀತ ನಿರ್ದೇಶಕ ಸಾಧು ಕೋಕಿಲ, ಹಿರಿಯ ನಿರ್ಮಾಪಕ ಎಸ್.ಎ. ಚಿನ್ನೇಗೌಡ, ನಟ ಸುಂದರ್ ರಾಜ್, ಹಿರಿಯ ನಟ ದೊಡ್ಡಣ್ಣ ಸೇರಿದಂತೆ ಅನೇಕ ಗಣ್ಯರು ಜೋ ಸೈಮನ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು ಶ್ರದ್ಧಾಂಜಲಿ ಸಲ್ಲಿಸಿದರು.
“ಚಿತ್ರರಂಗ ಒಬ್ಬ ಉತ್ತಮ ನಿರ್ದೇಶಕನನ್ನು ಕಳೆದುಕೊಂಡಿದೆ. ಅವರ ಸರಳತೆ ಮತ್ತು ಕೆಲಸದ ನಿಷ್ಠೆ ಸದಾ ನೆನಪಿನಲ್ಲಿ ಉಳಿಯಲಿದೆ,” ಎಂದು ಗಣ್ಯರು ಕಂಬನಿ ಮಿಡಿದರು. ಜೋ ಸೈಮನ್ ಅವರ ಅಂತ್ಯಕ್ರಿಯೆ ಕ್ರಿಶ್ಚಿಯನ್ ಸಂಪ್ರದಾಯದಂತೆ ನೆರವೇರಿಸಲಾಯಿತು. ಚಿತ್ರರಂಗದ ಹಲವರು ಉಪಸ್ಥಿತರಿದ್ದು, ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸಿದರು.
ಕನ್ನಡ ಚಿತ್ರರಂಗಕ್ಕೆ ಅಮೂಲ್ಯ ಸೇವೆ ಸಲ್ಲಿಸಿದ ಜೋ ಸೈಮನ್ ಅವರ ಅಗಲಿಕೆಯಿಂದ ಉಂಟಾದ ಶೂನ್ಯತೆ ತುಂಬಲಾರದಂತಾಗಿದೆ.
