Ashwaveega News 24×7 ಫೆಬ್ರವರಿ 2026 – ಬೆಂಗಳೂರು / ಕನಕಪುರ : ರಾಜ್ಯ ರಾಜಕಾರಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿರುವ ಬೆಳವಣಿಗೆಯೊಂದು ಕನಕಪುರದಲ್ಲಿ ನಡೆದ ಕನಕೋತ್ಸವದ ಮೂಲಕ ಬೆಳಕಿಗೆ ಬಂದಿದೆ. ಧಾರ್ಮಿಕ–ಸಾಂಸ್ಕೃತಿಕ ಕಾರ್ಯಕ್ರಮವೆಂದು ಹೇಳಲಾಗಿದ್ದ ಕನಕೋತ್ಸವ, ಇದೀಗ ಕಾಂಗ್ರೆಸ್ ವಲಯದಲ್ಲಿ ಡಿಕೆ ಶಿವಕುಮಾರ್ ಅವರ ಶಕ್ತಿ ಪ್ರದರ್ಶನದ ವೇದಿಕೆಯಾಗಿದೆಯೇ ಎಂಬ ಪ್ರಶ್ನೆ ಉದ್ಭವಿಸಿದೆ.
ಕನಕಪುರದಲ್ಲಿ ಆಯೋಜಿಸಲಾಗಿರುವ ಕನಕೋತ್ಸವಕ್ಕೆ50ಕ್ಕೂ ಹೆಚ್ಚು ಕಾಂಗ್ರೆಸ್ ಶಾಸಕರಿಗೆ ಆಹ್ವಾನ ನೀಡಲಾಗಿದ್ದು,ವೇದಿಕೆಯಲ್ಲಿ ಶಾಸಕರಿಗೆ ಸನ್ಮಾನ ನಡೆಸಲಾಗಿದೆ. ಕಳೆದ ಎರಡು ದಿನಗಳಲ್ಲಿ ಮಾತ್ರವೇ 36ಕ್ಕೂ ಹೆಚ್ಚು ಶಾಸಕರಿಗೆ ಗೌರವ ಸಲ್ಲಿಸಲಾಗಿದೆ. ಇಂದೂ ಸಹ ಹತ್ತಾರು ಶಾಸಕರು ಕನಕೋತ್ಸವದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ.
ರಾಜಕೀಯ ವಲಯದಲ್ಲಿ ಈ ಬೆಳವಣಿಗೆಯನ್ನು ಸದ್ದಿಲ್ಲದೇ ಶಾಸಕರ ಬೆಂಬಲ ಹೆಚ್ಚಿಸಿಕೊಳ್ಳುವ ಡಿಕೆ ತಂತ್ರ ಎಂದು ಹೇಳಲಾಗುತ್ತಿದೆ . ಹಿಂದಿನ ಯಾವುದೇ ಕನಕೋತ್ಸವಗಳಿಗಿಂತ ಭಿನ್ನವಾಗಿ, ಈ ಬಾರಿ ಕಾರ್ಯಕ್ರಮಕ್ಕೆ ರಾಜಕೀಯ ಮಹತ್ವ ಹೆಚ್ಚಾಗಿರುವುದು ಗಮನ ಸೆಳೆಯುತ್ತಿದೆ.
ಕನಕೋತ್ಸವದ ವೇದಿಕೆಯಲ್ಲಿ ಡಿಕೆ ಶಿವಕುಮಾರ್ ಅವರ ಬಗ್ಗೆ ನಿರಂತರ ಹೊಗಳಿಕೆ ಕೇಳಿಬಂದಿದ್ದು, ಕಾರ್ಯಕ್ರಮದ ಬಹುತೇಕ ಕ್ಷಣಗಳು ಡಿಕೆ ಶ್ಲಾಘನೆಗೆ ಸಾಕ್ಷಿಯಾಗಿವೆ. ಕಾರ್ಯಕ್ರಮದಲ್ಲಿ ಪಾಲ್ಗೊಂಡ ಹಲವು ಶಾಸಕರು “ಡಿಕೆ ಸಿಎಂ” ಎಂದು ಘೋಷಣೆ ಕೂಗಿರುವುದು ರಾಜ್ಯ ಕಾಂಗ್ರೆಸ್ನಲ್ಲಿ ಸಂಚಲನ ಮೂಡಿಸಿದೆ.
ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಅವರು “ಡಿಕೆ ನಮ್ಮ ಬಾಸ್” ಎಂದು ಹೇಳಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.
ಕನಕೋತ್ಸವದಲ್ಲಿ ಚಿತ್ರರಂಗದ ನಟ–ನಟಿಯರ ಭರ್ಜರಿ ಹಾಜರಿ ಕಂಡುಬಂದಿದ್ದು, ವೇದಿಕೆಯಿಂದಲೂ ಡಿಕೆ ಪರ ಧ್ವನಿಗಳು ಕೇಳಿಬಂದವು. ಇದರಿಂದ ಕನಕೋತ್ಸವ ಕೇವಲ ಸಾಂಸ್ಕೃತಿಕ ಕಾರ್ಯಕ್ರಮವಲ್ಲ, ರಾಜಕೀಯ ಸಂದೇಶ ಹೊತ್ತ ಸಂಭ್ರಮ ಎಂಬ ಅಭಿಪ್ರಾಯ ಬಲಪಡಿಸಿದೆ.

ಈ ಬೆಳವಣಿಗೆಯು ರಾಜ್ಯ ಕಾಂಗ್ರೆಸ್ ಒಳವಲಯದಲ್ಲಿ ಹೊಸ ಚರ್ಚೆಗಳಿಗೆ ದಾರಿ ಮಾಡಿಕೊಟ್ಟಿದೆ . ಡಿಕೆ ಶಿವಕುಮಾರ್ ಅವರ ಪ್ರಭಾವ , ಶಾಸಕರ ಬೆಂಬಲ ಮತ್ತು ಮುಂದಿನ ರಾಜಕೀಯ ನಡೆ ಕುರಿತು ಊಹಾಪೋಹಗಳು ಜೋರಾಗಿವೆ.
ಅಷ್ಟಕ್ಕೂ, ಯಾರೆಲ್ಲ ಶಾಸಕರು ಕನಕೋತ್ಸವದಲ್ಲಿ ಪಾಲ್ಗೊಂಡಿದ್ದಾರೆ ? ಯಾರು ಯಾರು ವೇದಿಕೆಯಲ್ಲಿ ಸನ್ಮಾನ ಪಡೆದಿದ್ದಾರೆ ? ಎಂಬ ಪ್ರಶ್ನೆಗಳು ಇದೀಗ ರಾಜಕೀಯ ವಲಯದಲ್ಲಿ ದೊಡ್ಡ ಚರ್ಚೆಯಾಗಿವೆ.
