Ashwaveega News 24×7 ಫೆಬ್ರವರಿ 14 -2026 – ಬೆಂಗಳೂರು : ಪ್ರೇಮಿಗಳ ದಿನಾಚರಣೆಯನ್ನು ವಿಭಿನ್ನವಾಗಿ ಆಚರಿಸುವ ಮೂಲಕ ವಾಟಾಳ್ ನಾಗರಾಜ್ ಮತ್ತೆ ಸುದ್ದಿಯಲ್ಲಿದ್ದಾರೆ. ಪ್ರೇಮಿಗಳ ದಿನದ ಅಂಗವಾಗಿ ನಗರದ ಮೈಸೂರು ಬ್ಯಾಂಕ್ ಸರ್ಕಲ್ ಬಳಿ ಕತ್ತೆಗಳ ಮದುವೆ ಮಾಡಿಸಿ ವಿಶಿಷ್ಟ ಸಂದೇಶ ನೀಡಿದ್ದಾರೆ.
ಸಂಪ್ರದಾಯಬದ್ಧವಾಗಿ ಪೂಜೆ ನೆರವೇರಿಸಿ, ತಾಳಿ ಕಟ್ಟುವ ಮೂಲಕ ಎರಡು ಕತ್ತೆಗಳನ್ನು ಒಂದಾಗಿಸಲಾಯಿತು. ಕತ್ತೆಗಳ ಮೆರವಣಿಗೆ ನಡೆಸಿ, ಪೂಜೆ ಮಾಡಿ ಮದುವೆ ನೆರವೇರಿಸಿದ ವಾಟಾಳ್ ನಾಗರಾಜ್, “ಪ್ರೇಮ ಮನುಷ್ಯರಿಗಷ್ಟೇ ಸೀಮಿತವಲ್ಲ, ಪ್ರಾಣಿ–ಪಕ್ಷಿಗಳಿಗೂ ಇದೆ. ಕತ್ತೆ ಬಹಳ ಪವಿತ್ರವಾದ ಪ್ರಾಣಿ. ಹೀಗಾಗಿ ಕತ್ತೆಗಳ ಮದುವೆ ಮಾಡಿದ್ದೇವೆ,” ಎಂದು ಹೇಳಿದರು.
“ನಾವು ಬಹಳ ವರ್ಷಗಳಿಂದ ಪ್ರೇಮಿಗಳ ದಿನಾಚರಣೆ ಮಾಡುತ್ತಾ ಬಂದಿದ್ದೇವೆ. ಪ್ರೇಮಕ್ಕೆ ಜಾತಿ–ಧರ್ಮ ಎನ್ನುವುದಿಲ್ಲ. ಪ್ರೇಮವೇ ಎಲ್ಲದಕ್ಕಿಂತ ಮೇಲಿರುವುದು. ಪ್ರೇಮಿಗಳಿಗೆ ಸಮಾಜ ಮತ್ತು ಸರ್ಕಾರ ರಕ್ಷಣೆ ನೀಡಬೇಕು,” ಎಂದು ಅವರು ಆಗ್ರಹಿಸಿದರು.
ಅಂತರಜಾತಿ ಅಥವಾ ಪ್ರೇಮ ವಿವಾಹವಾಗುವ ಜೋಡಿಗಳಿಗೆ ಸರ್ಕಾರವು 3 ಲಕ್ಷ ರೂಪಾಯಿ ಪ್ರೋತ್ಸಾಹಧನ ಹಾಗೂ ಸೂಕ್ತ ಭದ್ರತೆ ನೀಡಬೇಕು ಎಂದು ವಾಟಾಳ್ ನಾಗರಾಜ್ ಒತ್ತಾಯಿಸಿದರು.
ಈ ವಿಭಿನ್ನ ಆಚರಣೆ ಸಾರ್ವಜನಿಕರ ಗಮನ ಸೆಳೆದಿದ್ದು, ಸ್ಥಳದಲ್ಲಿ ಸಾಕಷ್ಟು ಜನರು ಸೇರಿ ಈ ವಿಶಿಷ್ಟ ‘ಕತ್ತೆಗಳ ಮದುವೆ’ ಕಾರ್ಯಕ್ರಮವನ್ನು ಕಣ್ತುಂಬಿಕೊಂಡರು.
