ಬೆಂಗಳೂರು : ಸ್ಯಾಂಡಲ್ವುಡ್ನಲ್ಲಿ ‘ಮಠ’, ‘ಎದ್ದೇಳು ಮಂಜುನಾಥ’ ಮುಂತಾದ ಸಿನಿಮಾಗಳನ್ನು ನಿರ್ದೇಶಿಸಿ ಎಲ್ಲರ ಗಮನಸೆಳೆದಿದ್ದ ನಿರ್ದೇಶಕ ಗುರುಪ್ರಸಾದ್ ಅವರು ಸಾವನ್ನಪ್ಪಿದ್ದು, ಕೆಲ ದಿನಗಳ ಹಿಂದೆ ಮಾದನಾಯಕನಹಳ್ಳಿಯಲ್ಲಿ ಇರುವ ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡು ಗುರುಪ್ರಸಾದ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಭಾನುವಾರ (ನ.3) ಮೃತದೇಹ ಪತ್ತೆಯಾಗಿದೆ. ಅವರಿಗೆ 52 ವರ್ಷ ವಯಸ್ಸಾಗಿದ್ದು, ಜಗ್ಗೇಶ್ ನಟನೆಯ ‘ಮಠ’, ‘ಎದ್ದೇಳು ಮಂಜುನಾಥ’ ಇನ್ನೂ ಕೆಲವು ಜನಪ್ರಿಯ ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. ಕೆಲವು ಸಿನಿಮಾಗಳಲ್ಲಿ ನಟನೆ ಸಹ ಮಾಡಿದ್ದ ಗುರುಪ್ರಸಾದ್ ನಿಧನ ಹೊಂದಿದ್ದಾರೆ. ಗುರುಪ್ರಸಾದ್ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕಿಸಲಾಗಿದ್ದು, ಮಾದನಾಯಕಹಳ್ಳಿಯ ಅಪಾರ್ಟ್ಮೆಂಟ್ನಲ್ಲಿ ಅವರ ಮೃತ ದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಗುರುಪ್ರಸಾದ್ ಅವರು ಸಾಲಗಾರರಿಗೆ ಹೆದರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ.
ಗುರುಪ್ರಸಾದ್ ಅವರು ಸಾಲದ ಬಾಧೆಯಿಂದ ಬಳಲುತ್ತಿದ್ದರು. ಅವರು ನಿರ್ದೇಶನ ಮಾಡಿದ್ದ ಇತ್ತೀಚೆಗಿನ ಸಿನಿಮಾ ‘ರಂಗನಾಯಕ’ ಹೀನಾಯ ಸೋಲು ಕಂಡಿತ್ತು. ‘ರಂಗನಾಯಕ’ ಸಿನಿಮಾದ ಫ್ಲಾಪ್ ಬಳಿಕ ಗುರುಪ್ರಸಾದ್ ಸಾಲಗಳಿಗೆ ಸಿಲುಕಿದ್ದರು. ಕೆಲ ತಿಂಗಳ ಹಿಂದೆ ಗುರುಪ್ರಸಾದ್ ಎರಡನೇ ಮದುವೆ ಸಹ ಆಗಿದ್ದರು ಎನ್ನಲಾಗುತ್ತಿದೆ. ಇದೀಗ ಏಕಾ-ಏಕಿ ನೇಣಿಗೆ ಕೊರಳೊಡ್ಡಿದ್ದಾರೆ.
ಬೆಂಗಳೂರು ಉತ್ತರ ತಾಲೂಕಿನ ಮಾದನಾಯಕನಹಳ್ಳಿ ಬಳಿಯ ಟಾಟಾ ನ್ಯೂ ಹಾವೆಲ್ ಅಪಾರ್ಟ್ಮೆಂಟ್ ನಲ್ಲಿ ಕಳೆದ ಎಂಟು ತಿಂಗಳಿಂದಲೂ ಗುರುಪ್ರಸಾದ್ ವಾಸವಿದ್ದರು, ಅದೇ ಮನೆಯಲ್ಲಿ ಈಗ ಗುರುಪ್ರಸಾದ್ ಅವರ ಶವ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮನೆಯಿಂದ ಕೆಟ್ಟ ವಾಸನೆ ಬರುತ್ತಿರುವುದನ್ನು ಗಮನಿಸಿದ ಸ್ಥಳೀಯರು ಬಗ್ಗಿ ನೋಡಿದಾಗ ಗುರುಪ್ರಸಾದ್ ಶವ ಫ್ಯಾನಿಗೆ ನೇತಾಡುತ್ತಿರುವುದು ಕಂಡಿದೆ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಸ್ಥಳಕ್ಕೆ ಮಾದನಾಯಕನಹಳ್ಳಿ ಪೊಲೀಸರು ದೌಡಾಯಿಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಗುರುಪ್ರಸಾದ್ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳಿಸಲಿದ್ದಾರೆ ಪೊಲೀಸರು.ಗುರುಪ್ರಸಾದ್ ಕನ್ನಡ ಚಿತ್ರರಂಗದ ಜನಪ್ರಿಯ ನಿರ್ದೇಶಕರಲ್ಲಿ ಒಬ್ಬರು. ‘ಮಠ’ ಸಿನಿಮಾ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಗುರುಪ್ರಸಾದ್ ಮೊದಲ ಸಿನಿಮಾಕ್ಕೆ ರಾಜ್ಯ ಪ್ರಶಸ್ತಿ ಪಡೆದಿದ್ದಾರೆ.