
Main accused Monojit Mishra has a history of harassment, assault, theft
ವೈದ್ಯಕೀಯ ವಿದ್ಯಾರ್ಥಿನಿ ಅತ್ಯಾಚಾರ, ಕೊಲೆ ಪ್ರಕರಣ ಮಾಸುವ ಮೊದಲೇ ಪಶ್ಚಿಮಬಂಗಾಳದ ಕೋಲ್ಕತ್ತಾದಲ್ಲಿ ಮತ್ತೊಂದು ಅಂಥದ್ದೇ ಪ್ರಕರಣ ಬೆಳಕಿಗೆ ಬಂದಿದೆ. ಈ ಬಾರಿ ಕಾನೂನು ವಿದ್ಯಾರ್ಥಿಯ ಮೇಲೆ ಪೈಶಾಚಿಕ ಕೃತ್ಯ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳು, ಕಾನೂನು ಕಾಲೇಜಿನ ಭದ್ರತಾ ಸಿಬ್ಬಂದಿ ಸೇರಿ ನಾಲ್ವರನ್ನು ಬಂಧಿಸಲಾಗಿದೆ.
ಜೂನ್ 25 ರಂದು ಇಲ್ಲಿನ ಕಸ್ಬಾ ಕಾನೂನು ಕಾಲೇಜಿನಲ್ಲಿ ವಿದ್ಯಾರ್ಥಿನಿಯ ಮೇಲೆ ಇಬ್ಬರು ಹಿರಿಯ ಮತ್ತು ಕಾಲೇಜಿನ ಮಾಜಿ ವಿದ್ಯಾರ್ಥಿಯಿಂದ ಅತ್ಯಾಚಾರ ನಡೆಸಿದ ಆರೋಪ ಮಾಡಲಾಗಿದೆ. ಸಮಯ ಮುಗಿದರೂ ತನ್ನನ್ನು ಕಾಲೇಜಿನಲ್ಲೇ ಉಳಿದುಕೊಳ್ಳಲು ಹೇಳಿ, ತನ್ನ ಸೀನಿಯರ್ ವಿದ್ಯಾರ್ಥಿಯಿಂದ ಅತ್ಯಾಚಾರ ನಡೆಸಲಾಯಿತು ಎಂದು ಸಂತ್ರಸ್ತೆ ದೂರು ನೀಡಿದ್ದಾರೆ.
ತನ್ನ ಮೇಲೆ ಪೈಶಾಚಿಕ ಕೃತ್ಯ ನಡೆಸಿದ್ದನ್ನು ಆರೋಪಿಗಳು ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದಿದ್ದರು. ಈ ವಿಷಯ ಬಹಿರಂಗಪಡಿಸಿದರೆ, ವಿಡಿಯೋ ಲೀಕ್ ಮಾಡುವುದಾಗಿ ಬೆದರಿಕೆ ಹಾಕಿದ್ದರು. ಆದಾಗ್ಯೂ ನಾನು ಧೈರ್ಯ ಮಾಡಿ ದೂರು ನೀಡಿದೆ ಎಂದು ಅತ್ಯಾಚಾರಕ್ಕೊಳಗಾದ ಸಂತ್ರಸ್ತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ದೂರಿನಲ್ಲಿ ಮೂವರು ಆರೋಪಿಗಳ ಜೊತೆಗೆ ಕಾಲೇಜಿನ ಭದ್ರತಾ ಸಿಬ್ಬಂದಿ ಹೆಸರನ್ನು ವಿದ್ಯಾರ್ಥಿನಿ ಉಲ್ಲೇಖಿಸಿದ್ದರು. ಇಂದು ಕಾಲೇಜಿನ ಗಾರ್ಡ್ ಆದ ಪಿನಾಕಿ ಬ್ಯಾನರ್ಜಿ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಒಟ್ಟು ನಾಲ್ವರನ್ನು ವಿಚಾರಣೆ ನಡೆಸಲಾಗುತ್ತಿದೆ.
ಕೋಲ್ಕತ್ತಾ ಪೊಲೀಸ್ ಪ್ರಧಾನ ಕಚೇರಿ ಲಾಲ್ಬಜಾರ್ ಮೂಲಗಳ ಪ್ರಕಾರ, ಸಂತ್ರಸ್ತ ವಿದ್ಯಾರ್ಥಿನಿ ಆರೋಪ ಪಟ್ಟಿಯಲ್ಲಿ ಕಾಲೇಜಿನ ಭದ್ರತಾ ಸಿಬ್ಬಂದಿಯ ಹೆಸರನ್ನು ಉಲ್ಲೇಖಿಸಿದ್ದಾಳೆ. ತನ್ನ ಮೇಲೆ ಪೈಶಾಚಿಕ ಕೃತ್ಯ ನಡೆಯುವ ಮೊದಲು ಆರೋಪಿಗಳು ಭದ್ರತಾ ಸಿಬ್ಬಂದಿಯನ್ನು ಬೆದರಿಸಿ ಕಾವಲು ಕೋಣೆಯಿಂದ ಬಲವಂತವಾಗಿ ಹೊರಗೆ ಹಾಕಿದರು ಎಂದು ತಿಳಿಸಿದ್ದಾರೆ.