Ashwaveega News 24×7 ಫೆಬ್ರವರಿ 03 -2026 :ಬಂಗಾರ ಮತ್ತು ಬೆಳ್ಳಿ ದರದಲ್ಲಿ ಕ್ಷಣಕ್ಷಣಕ್ಕೂ ತೀವ್ರ ಏರಿಳಿತ ಕಂಡುಬರುತ್ತಿದ್ದು, ಖರೀದಿದಾರರು ಹಾಗೂ ಹೂಡಿಕೆದಾರರು ಗೊಂದಲದಲ್ಲಿದ್ದಾರೆ. ಒಂದೇ ದಿನದಲ್ಲಿ ದಿಢೀರ್ ಇಳಿಕೆ, ಮತ್ತೆ ಸಡನ್ ಏರಿಕೆ ಕಾಣಿಸುತ್ತಿರುವುದು ಮಾರುಕಟ್ಟೆಯಲ್ಲಿ ಆತಂಕ ಹೆಚ್ಚಿಸಿದೆ.
ಕಳೆದ ಐದು ದಿನಗಳಿಂದ ಚಿನ್ನದ ದರ ನಿರಂತರ ಇಳಿಕೆಯಲ್ಲಿ ಸಾಗಿದ್ದರೂ, ನಿನ್ನೆ ಸಂಜೆ ಮತ್ತೆ ಏರಿಕೆ ಕಂಡಿದೆ. ಇಂದು 10 ಗ್ರಾಂ ಚಿನ್ನದ ಬೆಲೆ 1 ಲಕ್ಷದ 41 ಸಾವಿರ ರೂಪಾಯಿಗೆ ತಲುಪಿದೆ. ಇತ್ತೀಚೆಗೆ 1 ಲಕ್ಷದ 65 ಸಾವಿರ ರೂಪಾಯಿ ಮಟ್ಟಕ್ಕೇರಿದ್ದ ಗೋಲ್ಡ್, ಕ್ರಾಶ್ ಬಳಿಕ ಒಟ್ಟಾರೆ 24 ಸಾವಿರ ರೂಪಾಯಿ ಇಳಿಕೆ ಕಂಡಿದೆ.
ಚಿನ್ನ ಮಾತ್ರವಲ್ಲ, ಬೆಳ್ಳಿ ದರವೂ ಹಾವು–ಏಣಿ ಆಟ ಆಡುತ್ತಿದೆ. ಇಂದು 1 ಕೆಜಿ ಬೆಳ್ಳಿಯ ಬೆಲೆ 2 ಲಕ್ಷದ 36 ಸಾವಿರ ರೂಪಾಯಿ ಮಟ್ಟದಲ್ಲಿದೆ. ಆದರೆ ಕೇವಲ ಐದು ದಿನಗಳ ಹಿಂದಷ್ಟೇ 4 ಲಕ್ಷ ರೂಪಾಯಿ ಗಡಿ ತಲುಪಿದ್ದ ಬೆಳ್ಳಿ, ಇದೀಗ ಭಾರೀ ಕುಸಿತ ಕಂಡಿರುವುದು ಮಾರುಕಟ್ಟೆ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.
ಜಾಗತಿಕ ಮಾರುಕಟ್ಟೆಯ ಅನಿಶ್ಚಿತತೆ, ಡಾಲರ್ ಚಲನೆ, ಜಿಯೋ–ಪಾಲಿಟಿಕಲ್ ಟೆನ್ಶನ್ ಹಾಗೂ ಹೂಡಿಕೆದಾರರ ಲಾಭ ಬುಕ್ಕಿಂಗ್ ಕಾರಣಗಳಿಂದ ಬಂಗಾರ – ಬೆಳ್ಳಿ ದರದಲ್ಲಿ ತೀವ್ರ ಅಸ್ಥಿರತೆ ಉಂಟಾಗಿದೆ ಅಂತೆ . ಈ ಹಿನ್ನಲೆಯಲ್ಲಿ ಇಂದು ಚಿನ್ನ–ಬೆಳ್ಳಿ ಮತ್ತಷ್ಟು ಇಳಿಕೆಯಾಗುತ್ತಾ? ಅಥವಾ ಮತ್ತೆ ಏರಿಕೆಯಾಗುತ್ತಾ? ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡಿದೆ . ಖರೀದಿದಾರರು ಈಗಲೇ ಖರೀದಿಸಬೇಕಾ ? ಇನ್ನೂ ಸ್ವಲ್ಪ ಕಾಯಬೇಕಾ ? ಎನ್ನುವ ಗೊಂದಲದಲ್ಲಿದ್ದಾರೆ.
ಒಟ್ಟಿನಲ್ಲಿ, ಬಂಗಾರ–ಬೆಳ್ಳಿ ದರದ ಈ ಅಸ್ಥಿರತೆ ಹೂಡಿಕೆದಾರರಲ್ಲಿ ಟೆನ್ಶನ್ ಹೆಚ್ಚಿಸಿದ್ದು, ಮುಂದಿನ ಕೆಲ ದಿನಗಳಲ್ಲಿ ಮಾರುಕಟ್ಟೆ ಯಾವ ದಿಕ್ಕು ಹಿಡಿಯಲಿದೆ ಎನ್ನುವುದರ ಮೇಲೆ ಎಲ್ಲರ ಗಮನ ಕೇಂದ್ರೀಕೃತವಾಗಿದೆ.
