Ashwaveega News 24×7 ಜನವರಿ 26 : ದೇಶದಲ್ಲಿ ಲಕ್ಷುರಿ ಕಾರು ಖರೀದಿಗೆ ಕಾಯುತ್ತಿದ್ದವರಿಗೆ ಕೇಂದ್ರ ಸರ್ಕಾರದಿಂದ ಬಂಪರ್ ಗಿಫ್ಟ್ ಸಿಗುವ ಸಾಧ್ಯತೆ ಕಾಣಿಸುತ್ತಿದೆ. ಭಾರತ ಮತ್ತು ಯುರೋಪಿಯನ್ ಒಕ್ಕೂಟದ ನಡುವೆ ಮುಕ್ತ ವ್ಯಾಪಾರ ಒಪ್ಪಂದ (FTA) ಕುರಿತ ಮಹತ್ವದ ಚರ್ಚೆಗಳು ಅಂತಿಮ ಹಂತ ತಲುಪಿದ್ದು, ಇದರಿಂದ ಕಾರುಗಳ ಬೆಲೆಯಲ್ಲಿ ದೊಡ್ಡ ಬದಲಾವಣೆ ಸಾಧ್ಯತೆ ಇದೆ.
ಪ್ರಸ್ತಾವಿತ ಒಪ್ಪಂದದಂತೆ, ಯುರೋಪಿಯನ್ ದೇಶಗಳಿಂದ ಆಮದು ಆಗುವ ಕಾರುಗಳ ಮೇಲಿನ ತೆರಿಗೆಯನ್ನು 20 ರಿಂದ 40 ಶೇಕಡಾ ತನಕ ಇಳಿಕೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ. ಸದ್ಯ ಭಾರತದಲ್ಲಿ ಆಮದು ಕಾರುಗಳ ಮೇಲೆ 70ರಿಂದ 110 ಶೇಕಡಾ ವರೆಗೆ ಭಾರೀ ತೆರಿಗೆ ವಿಧಿಸಲಾಗುತ್ತಿದ್ದು, ಬಹುತೇಕ ಲಕ್ಷುರಿ ಕಾರುಗಳ ಮೇಲೆ ಶೇ.110ರಷ್ಟು ಟ್ಯಾಕ್ಸ್ ಇದೆ.
ಒಪ್ಪಂದ ಜಾರಿಯಾದರೆ ₹20 ಲಕ್ಷಕ್ಕಿಂತ ಹೆಚ್ಚಿನ ಬೆಲೆಯ ಕಾರುಗಳ ಮೇಲಿನ ತೆರಿಗೆ ಕಡಿಮೆಯಾಗುವ ಸಾಧ್ಯತೆ ಇದೆ. ಇದರ ಪರಿಣಾಮವಾಗಿ ವೋಕ್ಸ್ವ್ಯಾಗನ್, ಮರ್ಸಿಡೆಸ್ ಬೆಂಜ್, ಬಿಎಂಡಬ್ಲ್ಯು ಸೇರಿದಂತೆ ಯುರೋಪಿಯನ್ ಕಾರು ತಯಾರಕ ಕಂಪನಿಗಳ ಕಾರುಗಳ ಬೆಲೆ ಗಣನೀಯವಾಗಿ ಇಳಿಕೆಯಾಗಬಹುದು.
ತೆರಿಗೆ ಇಳಿಕೆಯಿಂದ ಯುರೋಪಿಯನ್ ಕಂಪನಿಗಳಿಗೆ ಭಾರತದ ಮಾರುಕಟ್ಟೆಗೆ ಸುಲಭ ಪ್ರವೇಶ ಸಿಗಲಿದ್ದು, ಟ್ಯಾರಿಫ್ ಕಡಿತವು ವಿದೇಶಿ ಕಾರುಗಳ ಬೆಲೆ ಇಳಿಕೆಗೆ ದಾರಿ ಮಾಡಿಕೊಡಲಿದೆ. ಇದರೊಂದಿಗೆ ದೇಶೀಯ ಕಾರು ತಯಾರಕರಾದ ಮಾರುತಿ ಸುಜುಕಿ, ಟಾಟಾ ಮೋಟಾರ್ಸ್ ಮತ್ತು ಮಹೀಂದ್ರಾಗೆ ಮುಂದಿನ ದಿನಗಳಲ್ಲಿ ಕಠಿಣ ಪೈಪೋಟಿ ಎದುರಾಗುವ ಸಾಧ್ಯತೆ ಇದೆ. ಆದರೆ ಗಮನಾರ್ಹ ಅಂಶವೆಂದರೆ, ಇಲೆಕ್ಟ್ರಿಕ್ ವಾಹನಗಳಿಗೆ (EV) ಈ ಒಪ್ಪಂದದ ಅಡಿಯಲ್ಲಿ ಯಾವುದೇ ತೆರಿಗೆ ರಿಲೀಫ್ ಇಲ್ಲ ಎನ್ನಲಾಗಿದೆ.
ಯುರೋಪಿಯನ್ ಒಕ್ಕೂಟದ ಜೊತೆ ಈ ಒಪ್ಪಂದಕ್ಕೆ ಇಂದು ಸಹಿ ಬೀಳುತ್ತದೆಯೇ? ಅಥವಾ ಬಜೆಟ್ ನಂತರ, ಏಪ್ರಿಲ್ ಬಳಿಕ ನಿಯಮಗಳು ಜಾರಿಗೆ ಬರಲಿವೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಈ ಬಗ್ಗೆ ಕೇಂದ್ರ ಸರ್ಕಾರದ ಅಧಿಕೃತ ಘೋಷಣೆಗೆ ದೇಶವಾಸಿಗಳು ಕಾತರದಿಂದ ಕಾಯುತ್ತಿದ್ದಾರೆ. ಒಟ್ಟಾರೆ, ಒಪ್ಪಂದ ಜಾರಿಯಾದರೆ ಭಾರತದ ಲಕ್ಷುರಿ ಕಾರು ಮಾರುಕಟ್ಟೆಯಲ್ಲಿ ಭಾರೀ ಬದಲಾವಣೆ ಸಂಭವಿಸುವ ಸಾಧ್ಯತೆ ಇದೆ.
