
Guru Purnima 2025
(ಅಶ್ವವೇಗ) Ashwaveega News 24×7 ಜು.10: ಗುರು ಪೂರ್ಣಿಮಾವನ್ನು ಆಷಾಢ ಮಾಸದ ಹುಣ್ಣಿಮೆಯ ದಿನದಂದು ಆಚರಿಸಲಾಗುತ್ತದೆ. ಗುರು ಪೂರ್ಣಿಮಾವನ್ನು ಗುರು ಮತ್ತು ಶಿಷ್ಯರ ನಡುವಿನ ಬಾಂದವ್ಯವನ್ನು ಗೌರವಿಸುವುದಕ್ಕಾಗಿ ಆಚರಿಸಲಾಗುತ್ತದೆ. ಈ ದಿನದಂದು ಗುರುಗಳನ್ನು ದೇವರೆಂದು ಪೂಜಿಸುವ ಪ್ರತಿಯೊಬ್ಬ ವ್ಯಕ್ತಿಗೂ ಮೀಸಲಿಡಲಾದ ದಿನವಾಗಿದೆ.
ಪ್ರತಿಯೊಬ್ಬರ ಬದುಕಿನಲ್ಲೂ ಗುರುವಿನ ಮಹತ್ವ ತುಂಬಾನೇ ವಿಶೇಷವಾಗಿರುತ್ತದೆ. ಗುರು ನಮಗೆ ಪ್ರತಿಯೊಂದು ಹಂತದಲ್ಲೂ ಜ್ಞಾನವನ್ನು ಮತ್ತು ಮಾರ್ಗದರ್ಶನವನ್ನು ನೀಡುವವನಾಗಿದ್ದಾನೆ. ಅವರು ನಮಗೆ ಪೋಷಕರಾಗಿದ್ದರು ಸರಿ, ಗುರುಗಳಾಗಿದ್ದರು ಸರಿ ನಾವೆಲ್ಲರೂ ಗುರು ಪೂರ್ಣಿಮೆಯಂದು ಅವರನ್ನು ಸ್ಮರಿಸುತ್ತೇವೆ.
ಗುರು ಪೂರ್ಣಿಮಾ ಕೇವಲ ಧಾರ್ಮಿಕ ಮಹತ್ವವನ್ನು ಹೊಂದಿರುವ ದಿನವಲ್ಲ. ಬದಲಾಗಿ, ಇದು ಪ್ರತಿಯೊಬ್ಬ ವ್ಯಕ್ತಿಯ ಜೀವನಕ್ಕೆ ಮಾರ್ಗದರ್ಶನವನ್ನು ನೀಡುವ ಗುರುವನ್ನು ಗೌರವಿಸುವ ದಿನವಾಗಿದೆ. ಅದು ನಮಗೆ ಶಾಲೆಯಲ್ಲಿ ವಿದ್ಯೆಯನ್ನು ಕಲಿಸಿದ ಗುರುಗಳೇ ಆಗಿರಬೇಕೆಂದೇನಿಲ್ಲ.
ನಮಗೆ ಮೊದಲ ಮಾತನ್ನು ಕಲಿಸಿದ ನಮ್ಮ ಪೋಷಕರಿಗೆ ಆಗಿರಬಹುದು, ಜೀವನದ ಪ್ರತಿಯೊಂದು ಹಂತದಲ್ಲೂ ಮಾರ್ಗದರ್ಶನವನ್ನು ನೀಡಿದವರಿಗೆ ಆಗಿರಬಹುದು ಈ ದಿನ ಗೌರವವನ್ನು ಸೂಚಿಸಲಾಗುತ್ತದೆ. ಕೆಲವೊಂದು ಕಡೆಗಳಲ್ಲಿ ಈ ದಿನ ಜನರು ಪವಿತ್ರ ನದಿಗಳಲ್ಲಿ ಸ್ನಾನವನ್ನು ಮಾಡಿ ಗುರುವನ್ನು ಸ್ಮರಿಸಿ ಉಪವಾಸ ವ್ರತವನ್ನು ಆಚರಿಸುತ್ತಾರೆ. ಈ ದಿನ ಗುರುಗಳಿಗೆ ಉಡುಗೊರೆಯನ್ನು ನೀಡುತ್ತಾರೆ. ಅವರ ಆಶೀರ್ವಾದವನ್ನು ಪಡೆದುಕೊಳ್ಳುತ್ತಾರೆ. ಗುರುವಿಗೆ ಸಂಬಂಧಿಸಿದ ಕಥೆಗಳನ್ನು, ಭಜನೆಗಳನ್ನು ಮತ್ತು ಮಂತ್ರಗಳನ್ನು ಈ ದಿನ ಪಠಿಸಲಾಗುತ್ತದೆ. ಮಾತ್ರವಲ್ಲದೇ . ಮಹರ್ಷಿ ವೇದ ವ್ಯಾಸರು ಆಷಾಢ ಮಾಸದ ಹುಣ್ಣಿಮೆಯಂದು ತಮ್ಮ ಶಿಷ್ಯರು ಮತ್ತು ಋಷಿಗಳಿಗೆ ಶ್ರೀಮದ್ ಭಾಗವತ ಪುರಾಣದ ಜ್ಞಾನವನ್ನು ನೀಡಿದರು ಎಂದು ಹೇಳಲಾಗುತ್ತದೆ.