
ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಇಂಗ್ಲೆಂಡ್ ತಂಡದ ಅದೃಷ್ಟ ಕೈ ಕೊಟ್ಟಿದೆ. ಆಡಿದ 3 ಪಂದ್ಯಗಳಿಂದ 3ರಲ್ಲೂ ಸೋತು ಸುಣ್ಣವಾಗಿದೆ. ಪ್ರಶಸ್ತಿಗಾಗಿ ಭಾಗಿಯಾಗಿದ್ದ 8 ತಂಡಗಳ ಪೈಕಿ 7 ತಂಡಗಳು ಕನಿಷ್ಠ 1 ಅಂಕನಾದ್ರೂ ಪಡೆದರೆ, ಇಂಗ್ಲೆಂಡ್ ತಂಡ ಯಾವುದೇ ಅಂಕವಿಲ್ಲದೇ ಭಾರೀ ಮುಖಭಂಗದೊಂದಿಗೆ ಟೂರ್ನಿಗೆ ಗುಡ್ ಬೈ ಹೇಳಿದೆ. ದಕ್ಷಿಣ ಆಫ್ರಿಕಾ ವಿರುದ್ದ ನಡೆದ ತನ್ನ ಅಂತಿಮ ಲೀಗ್ ಪಂದ್ಯದಲ್ಲಿಯೂ ಕೂಡ ಬ್ಯಾಟಿಂಗ್ನಲ್ಲಿ ಮತ್ತೊಮ್ಮೆ ಎಡವಿದ ಆಂಗ್ಲರಿಗೆ ದಕ್ಷಿಣ ಆಫ್ರಿಕಾ ಹೀನಾಯ ಸೋಲಿನ ರುಚಿ ತೋರಿಸಿದೆ. ಇಂಗ್ಲೆಂಡ್ ತಂಡದ ನಾಯಕನ್ನಾಗಿ ಕೊನೆ ಬಾರಿಗೆ ಕಣಕ್ಕಿಳಿದ ಜೋಸ್ ಬಟ್ಲರ್ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಫೀಲ್ ಸಾಲ್ಟ್ (8), ಡಕೆಟ್ (24), ಜೋ ರೂಟ್ (37), ಹ್ಯಾರಿ ಬ್ರೂಕ್ (19), ಜೋಸ್ ಬಟ್ಲರ್ (21),ಲಿಯಾಮ್ ಲಿವಿಂಗ್ಸ್ಟೋನ್ (9) ಅವರ ನೀರಸ ಬ್ಯಾಟಿಂಗ್ನಿಂದ ಇಂಗ್ಲೆಂಡ್ 38.2 ಓವರ್ಗಳಲ್ಲಿ 179 ರನ್ಗಳಿಗೆ ಅಲೌಟ್ ಆಯಿತು. ನಂತರ ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಖಾ ರಾಸ್ಸಿ ವ್ಯಾನ್ ಡೆರ್ ಡಸ್ಸೆನ್ (72). ಹೆನ್ರಿಕ್ ಕ್ಲಾಸೆನ್ (64) ಅವರ ಅರ್ಧ ಶತಕ ಬಲದಿಂದ 29.1 ಓವರ್ಗಳಲ್ಲಿ ಗುರಿಯನ್ನು ಮುಟ್ಟಿತ್ತು. ಈ ಗೆಲ್ಲುವಿನೊಂದಿಗೆ ದಕ್ಷಿಣ ಆಫ್ರಿಕಾ ಟೇಬಲ್ ಟಾಪರ್ ಆಗಿ ಲೀಗ್ ಹಂತ ಮುಗಿಸಿದೆ. ಇತ್ತ ಇಂಗ್ಲೆಂಡ್ ತಂಡ ಬಂದ ದಾರಿಗೆ ಸುಂಕವಿಲ್ಲದಂತೆ ಯಾವುದೇ ಅಂಕವಿಲ್ಲದೇ ತವರಿನತ್ತ ಪ್ರಯಾಣ ಬೆಳೆಸಲಿದೆ.

ಅಭಿಷೇಕ್. ಎಸ್