Ashwaveega News 24×7 ಜನವರಿ 26 – ಬೆಂಗಳೂರು : “ಯಾವ ಕಾರಣಕ್ಕೂ ಜೆಡಿಎಸ್ ಅಧಿಕಾರಕ್ಕೆ ಬರಲ್ಲ” ಎಂಬ ಮುಖ್ಯಮಂತ್ರಿ ಹೇಳಿಕೆಗೆ ಜೆಡಿಎಸ್ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ. ಇಂತಹ ಹೇಳಿಕೆಗಳೇ ನಮ್ಮ ಗೆಲುವಿಗೆ ಸಾಕ್ಷಿ ಎಂದು ಅವರು ಕೌಂಟರ್ ಕೊಟ್ಟಿದ್ದಾರೆ.
“ಈ ಥರ ಸಿಎಂ ಹೇಳಿಕೆ ಕೊಡ್ತಿದಾರೆ ಅಂದ್ರೆ, ನಾವೇ ಗೆಲ್ಲೋದು ಪಕ್ಕಾ. 2018ರಲ್ಲಿ ಅವರಪ್ಪನಾಣೆ ನಾನು ಸಿಎಂ ಆಗಲ್ಲ ಅಂತ ಹೇಳಿದ್ರು. ಆದರೆ ಫಲಿತಾಂಶ ಬಂದ ಮೇಲೆ ಅವರೇ ನಮ್ಮ ಮನೆಗೆ ಬಂದು ‘ನೀವೇ ಸಿಎಂ ಆಗಿ’ ಅಂತ ಕೇಳಿದ್ರು. ಅಂತಿಮವಾಗಿ ನಾನು ಮುಖ್ಯಮಂತ್ರಿ ಆದೆ,” ಎಂದು ಕುಮಾರಸ್ವಾಮಿ ನೆನಪಿಸಿದರು.
ಈಗಲೂ ಅಷ್ಟೇ ಅಂತಹ ಪರಿಸ್ಥಿತಿ ಇದೆ. 2028ರಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದೇ ಬರುತ್ತದೆ. ಈ ಬಾರಿ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
“2028ಕ್ಕೆ ಜನರ ಸರ್ಕಾರ, ರಾಮರಾಜ್ಯದ ಸರ್ಕಾರ ಬರುತ್ತೆ. ನಾವು ಜನರ ಬಳಿ ಅವಕಾಶ ಕೇಳುವ ಅವಶ್ಯಕತೆಯೇ ಇಲ್ಲ. ಸರ್ಕಾರದ ಎಲ್ಲಾ ಗ್ಯಾರಂಟಿಗಳು ಧೂಳೀಪಟ ಮಾಡಲು ಜನ ಕಾಯ್ತಿದ್ದಾರೆ,” ಎಂದು ಅವರು ವಾಗ್ದಾಳಿ ನಡೆಸಿದರು . ರಾಜ್ಯಾದ್ಯಂತ ಜನರು “ಮುಂದಿನ ಸಿಎಂ ಕುಮಾರಣ್ಣ” ಎಂದು ಕೂಗ್ತಿದ್ದಾರೆ. ಸಿಎಂ ಸ್ಥಾನ ಮುಖ್ಯವಲ್ಲ, ಸರ್ಕಾರ ತರುವುದಷ್ಟೇ ನಮ್ಮ ಗುರಿ ಎಂದು ಸ್ಪಷ್ಟಪಡಿಸಿದರು.
ಒಟ್ಟಾರೆ, ಮುಖ್ಯಮಂತ್ರಿ ಹೇಳಿಕೆಯನ್ನು ತಮ್ಮ ರಾಜಕೀಯ ಬಲವಾಗಿ ಪರಿಗಣಿಸಿರುವ ಕುಮಾರಸ್ವಾಮಿ, 2028ರ ಚುನಾವಣೆ ಜೆಡಿಎಸ್ಗೆ ನಿರ್ಣಾಯಕವಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
