Ashwaveega News 24×7 ಜನವರಿ 26 – ನವದೆಹಲಿ : ದೇಶವು ಇಂದು 77ನೇ ಗಣರಾಜ್ಯೋತ್ಸವವನ್ನು ಅತ್ಯಂತ ವೈಭವದಿಂದ ಆಚರಿಸಿತು. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಕರ್ತವ್ಯ ಪಥದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ , ಸಂವಿಧಾನ ಅಂಗೀಕರಿಸಿದ ಈ ಐತಿಹಾಸಿಕ ಸುದಿನದ ಮಹತ್ವವನ್ನು ನೆನಪಿಸಿದರು .
ಕರ್ತವ್ಯಪಥದಲ್ಲಿ ನಡೆದ ಗಣರಾಜ್ಯೋತ್ಸವ ಪರೇಡ್ನಲ್ಲಿ ‘ಭಾರತ’ದ ಶಕ್ತಿ, ಸಾಂಸ್ಕೃತಿಕ ವೈವಿಧ್ಯ ಮತ್ತು ಸೈನಿಕ ಸಾಮರ್ಥ್ಯದ ಅನಾವರಣ ಕಂಡುಬಂದಿತು. ಈ ಬಾರಿ ಒಟ್ಟು 23 ಸ್ತಬ್ಧ ಚಿತ್ರಗಳು ವಿವಿಧ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಪರಂಪರೆ, ಅಭಿವೃದ್ಧಿ ಮತ್ತು ನವಭಾರತದ ಕನಸನ್ನು ಪ್ರತಿಬಿಂಬಿಸಿವೆ .
ಸುಮಾರು 2500 ಕಲಾವಿದರು ಭಾಗವಹಿಸಿದ ‘ವಂದೇ ಮಾತರಂ’ ಗೀತೆಯ ವರ್ಣಚಿತ್ರ ಪ್ರದರ್ಶನ ವಿಶೇಷ ಆಕರ್ಷಣೆಯಾಗಿತ್ತು. ಮೊದಲ ಬಾರಿಗೆ ಸೂರ್ಯಾಸ್ತದ ವೇಳೆ ರಾಕೆಟ್ ಲಾಂಚರ್ ಪ್ರದರ್ಶನ ಜನರ ಗಮನ ಸೆಳೆದಿತು.
ಪರೇಡ್ನಲ್ಲಿ ಮುಧೋಳ ನಾಯಿ ಹಾಗೂ ಕುದುರೆಗಳ ಶಿಸ್ತುಬದ್ಧ ಪ್ರದರ್ಶನ ವಿಶೇಷ ಮೆಚ್ಚುಗೆಗೆ ಪಾತ್ರವಾಯಿತು. ಸಿಆರ್ಪಿಎಫ್ ಪುರುಷರ ತುಕಡಿಗೆ ಮಹಿಳಾ ಸಾರಥ್ಯ ನೀಡಿರುವುದು ಲಿಂಗ ಸಮಾನತೆಯ ಶಕ್ತಿಶಾಲಿ ಸಂದೇಶ ನೀಡಿತು. ಈ ವರ್ಷದ ಗಣರಾಜ್ಯೋತ್ಸವಕ್ಕೆ ಯುರೋಪಿಯನ್ ಕೌನ್ಸಿಲ್ ಅಧ್ಯಕ್ಷರು ಮುಖ್ಯ ಅತಿಥಿಯಾಗಿ ಆಗಮಿಸಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಮಹತ್ವವನ್ನು ಪ್ರತಿಬಿಂಬಿಸಿತು .
ರಕ್ಷಣಾ ಕ್ಷೇತ್ರದ ಸಾಮರ್ಥ್ಯವನ್ನು ಪ್ರದರ್ಶಿಸುವಂತೆ ಶಕ್ತಿಬಾಣ್ & ದಿವ್ಯಾಸ್ತ್ರ ವಾಹನಗಳು, ಅಮೋಘ್ ಹಾಗೂ ಧನುಷ್ ಗನ್ಗಳು ಪರೇಡ್ನಲ್ಲಿ ಸಾಗಿದವು. ಭಾರತೀಯ ವಾಯುಸೇನೆ ಮತ್ತು ನೌಕಾಪಡೆಯ ಬ್ಯಾಂಡ್ಗಳ ಸಂಗೀತ ಜನರಲ್ಲಿ ದೇಶಭಕ್ತಿಯ ಸಂಚಲನ ಮೂಡಿಸಿತು. ಸಿಖ್ ರೆಜಿಮೆಂಟ್ನ ಭೈರವ್ ಬೆಟಾಲಿಯನ್ ತನ್ನ ಶೌರ್ಯ ಮತ್ತು ಶಿಸ್ತಿನ ಪ್ರದರ್ಶನದ ಮೂಲಕ ಭರ್ಜರಿ ಗೌರವ ಪಡೆದಿತು .
ಒಟ್ಟಾರೆ, 77ನೇ ಗಣರಾಜ್ಯೋತ್ಸವ ಪರೇಡ್ ‘ಶಕ್ತಿಶಾಲಿ ಭಾರತ, ಏಕತೆಯ ಭಾರತ’ ಎಂಬ ಸಂದೇಶವನ್ನು ಜಗತ್ತಿಗೆ ಸಾರಿತು.
