
Ashwaveega News 24×7 ಅ. 19: ಎತ್ತ ನೋಡಿದ್ರೂ ನೀರೋ ನೀರು.. ರಸ್ತೆಗಳು ಜಲಾವೃತ.. ಸೇತುವೆ ಮುಳುಗಡೆ.. ಸಂಚಾರ ಸ್ಥಗಿತ.. ಪ್ರವಾಹದಂತೆ ಹರಿಯುತ್ತಿರೋ ಹಳ್ಳ-ಕೊಳ್ಳ, ನದಿಗಳು.. ಬಿಟ್ಟು ಬಿಡದೇ ಅಬ್ಬರಿಸುತ್ತಿರೋ ಮಳೆಗೆ ಮನೆ ಕುಸಿತ.. ಸಾವುನೋವು.. ಧಾರಾಕಾರ ವರುಣಾರ್ಭಟಕ್ಕೆ ತತ್ತರಿಸಿ ಹೋಗಿರುವ ಕರುನಾಡು..
ಎರಡು ಮೂರು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆಗೆ ಕರುನಾಡು ತತ್ತರಿಸಿ ಹೋಗಿದೆ. ಬಿಟ್ಟು ಬಿಡದೇ ಸುರಿಯುತ್ತಿರುವ ರಣಮಳೆಗೆ ಜನ ಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಮಳೆಗೆ ಕರಾವಳಿಯಲ್ಲಿ ಕೋಲಾಹಲ ಸೃಷ್ಟಿಯಾಗಿದ್ರೆ, ಉತ್ತರ ಕರ್ನಾಟಕ ನಲುಗಿ ಹೋಗಿದೆ. ರೆಡ್ ಅಲರ್ಟ್, ಮಳೆ ಮುನ್ನೆಚ್ಚರಿಕೆ ಹಿನ್ನೆಲೆ ರಾಜ್ಯದ 6 ಜಿಲ್ಲೆಗಳ ಶಾಲಾ-ಕಾಲೇಜುಗಳಿಗೆ ಘೋಷಣೆ ಮಾಡಲಾಗಿದೆ.
ಮಹಾರಾಷ್ಟ್ರದ ಪಶ್ಚಿಮಘಟ್ಟ ಭಾಗದಲ್ಲಿ ವರುಣಾರ್ಭಟ ಮುಂದುವರಿದಿದೆ. ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ದೂದಗಂಗಾ ನದಿಯಿಂದ ಜನರಿಗೆ ಪ್ರವಾಹದ ಆತಂಕ ಎದುರಾಗಿದೆ. ಭಾರೀ ಮಳೆಯಿಂದ ಚಿಕ್ಕೋಡಿ ವ್ಯಾಪ್ತಿಯಲ್ಲಿ 8 ಕೆಳ ಹಂತದ ಸೇತುವೆಗಳು ಮತ್ತೆ ಜಲಾವೃತಗೊಂಡಿವೆ. 16 ಗ್ರಾಮಗಳ ಸಂಪರ್ಕ ಕಡಿತಗೊಂಡು ಸಂಚಾರಕ್ಕೆ ಪರದಾಡುವಂತಾಗಿದೆ. ಅಲ್ಲದೇ ರೈತರ ಜಮೀನುಗಳಿಗೆ ನೀರು ಹಾಯಿಸಲು ಹಾಕಿದ್ದ ಪಂಪ್ಸೆಟ್ ಕೊಚ್ಚಿ ಹೋಗಿದೆ.
ಇತ್ತ ಬಾಗಲಕೋಟೆಯಲ್ಲೂ ವರುಣನ ಅಬ್ಬರ ಮುಂದುವರಿದಿದೆ. ಮುಧೋಳದಲ್ಲಿ ಏಕಾಏಕಿ ಮನೆ ಕುಸಿತಗೊಂಡಿದ್ದು, ಮನೆಯಲ್ಲಿದ್ದ ದವಸ-ಧಾನ್ಯಗಳು ಚೆಲ್ಲಾಪಿಲ್ಲಿಯಾಗಿವೆ. ಸುತ್ತಮುತ್ತಲಿನ ಜಮೀನುಗಳಿಗೆ ನೀರು ನುಗ್ಗಿ ಬೆಳೆಗಳು ನಾಶವಾಗಿವೆ.
ಮಲೆನಾಡಿನಲ್ಲಿ ಮೇಘರಾಜನ ಅಬ್ಬರ ಜೋರಾಗಿದೆ. ಲಿಂಗನಮಕ್ಕಿ ಡ್ಯಾಂನಿಂದ ಹಾಲ್ನೊರೆಯಂತೆ ನೀರು ಉಕ್ಕಿ ಹರಿಯುತ್ತಿದೆ. ಜಲಾಶಯದ 11 ಕ್ರಸ್ಟ್ಗೇಟ್ಗಳ ಮೂಲಕ ನದಿಗೆ ನೀರು ಬಿಡುಗಡೆ ಮಾಡಲಾಗಿದೆ.
ಇತ್ತ KRS ಡ್ಯಾಂನಿಂದ 1.20 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದ್ದು, ಕಾವೇರಿ ನದಿ ಪಾತ್ರದ ಜನರಿಗೆ ಪ್ರವಾಹದ ಭೀತಿ ಎದುರಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಪ್ರಸಿದ್ಧ ರಂಗನತಿಟ್ಟು ಪಕ್ಷಿಧಾಮಕ್ಕೆ ದೋಣಿ ವಿಹಾರ ಸ್ಥಗಿತಗೊಳಿಸಲಾಗಿದೆ. ಕಾವೇರಿ ನದಿ ತಟದ ನಿಮಿಷಾಂಭ ದೇಗುಲಕ್ಕೆ ನಿರ್ಬಂಧ ಹೇರಲಾಗಿದೆ. ಸಾಯಿ ಮಂದಿರಕ್ಕೂ ನೀರು ನುಗ್ಗಿ, ಪಶ್ಚಿಮ ವಾಹಿನಿ, ಸ್ನಾನಘಟ್ಟ ಶ್ರದ್ದಾಕೇಂದ್ರ ಮುಳುಗಡೆಯಾಗಿದೆ. ಪ್ರವಾಹ ಪರಿಸ್ಥಿತಿ ಎದುರಿಸಲು ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ.
ಶ್ರೀರಂಗಪಟ್ಟಣದ ಬಳಿ ಕಾವೇರಿ ನದಿಯಲ್ಲಿ ಸಿಲುಕಿದ್ದ ಬಳ್ಳಾರಿ ಮೂಲದ ಲಕ್ಷ್ಮಣ ಸಹನಿ ಎಂಬ ವ್ಯಕ್ತಿಯನ್ನ ರಕ್ಷಣೆ ಮಾಡಲಾಗಿದೆ. ಕೆಆರ್ಎಸ್ ಡ್ಯಾಂನಿಂದ 1 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿತ್ತು. ಈ ವೇಳೆ ನಡುಗಡ್ಡೆಯಲ್ಲಿ ಸಿಲುಕಿದ ಲಕ್ಷ್ಮಣ್, ತನ್ನನ್ನ ರಕ್ಷಣೆ ಮಾಡಿ ಎಂದು ಚೀರಾಡಿದ್ದಾನೆ. ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಬೋಟ್ ಮೂಲಕ ರಕ್ಷಣೆ ಮಾಡಿದ್ದಾರೆ.
ನಿರಂತರ ಮಳೆಗೆ ಜನನಿಬಿಡ ರಸ್ತೆಯಲ್ಲಿ ಬೃಹತ್ ಮರವೊಂದು ನೋಡು ನೋಡ್ತಿದ್ದಂತೆ ಧರೆಗುರುಳಿದೆ. ಚಿಕ್ಕಬಳ್ಳಾಪುರದ ಕೆನರಾ ಬ್ಯಾಂಕ್ ಬಳಿ ವಿದ್ಯುತ್ ಕಂಬದ ಮೇಲೆಯೇ ಮರ ಬಿದ್ದಿದೆ. ಮರ ಬಿದ್ದ ಪರಿಣಾಮ ಪಾರ್ಕಿಂಗ್ ಮಾಡಿದ್ದ ಕಾರು, ಬೈಕ್ಗಳು ಜಖಂಗೊಂಡಿವೆ.
ಬೆಳಗಾವಿ ಜಿಲ್ಲೆಯಲ್ಲಿ ರಣಮಳೆಗೆ ಮಹಿಳೆಯೊಬ್ಬಳು ಬಲಿಯಾಗಿದ್ದಾಳೆ. ಗೋಕಾಕ್ನ ಸಂಗಮ ನಗರದಲ್ಲಿ ಮನೆ ಗೋಡೆ ಕುಸಿದು 50 ವರ್ಷದ ಫರೀದಾ ಗಂಭೀರ ಗಾಯಗೊಂಡಿದ್ದಳು. ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಿಸದೆ ಫರೀದಾ ಮೃತಪಟ್ಟಿದ್ದಾಳೆ. ನಿರಂತರ ಮಳೆಯಿಂದ ಜನರಿಗೆ ಜಲ ಸಂಕಷ್ಟ ಶುರುವಾಗಿದೆ.. ಬೆಳಹಾನಿಯಿಂದ ರೈತರಿಗೆ ಕೆಲವೆಡೆ ನಷ್ಟವೂ ಆಗ್ತಿದೆ. ಒಟ್ಟಾರೆ ಸಾಕಷ್ಟು ಅವಾಂತರಗಳನ್ನ ವರುಣ ಸೃಷ್ಟಿಸಿದ್ದಾನೆ.