
India-UK Historic Free Trade Agreement Signed
Ashwaveega News 24×7 ಜು. 24: ಭಾರತ ಮತ್ತು ಯುನೈಟೆಡ್ ಕಿಂಗ್ಡಮ್ ರಾಷ್ಟ್ರಗಳ ನಡುವಿನ ಐತಿಹಾಸಿಕ ಮುಕ್ತ ವ್ಯಾಪಾರ ಒಪ್ಪಂದಕ್ಕೆ (FTA) ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ಯುನೈಟೆಡ್ ಕಿಂಗ್ಡಮ್ ಪ್ರಧಾನಿ ಕೇರ್ ಸ್ಟಾರ್ಮರ್ ಸಹಿ ಹಾಕಿದ್ದಾರೆ. ಇದರೊಂದಿಗೆ ಈ ಒಪ್ಪಂದವು ಎರಡು ರಾಷ್ಟ್ರಗಳ ನಡುವೆ ವಾರ್ಷಿಕವಾಗಿ $34 ಶತಕೋಟಿ ದ್ವಿಪಕ್ಷೀಯ ವ್ಯಾಪಾರವನ್ನು ಹೆಚ್ಚಿಸುವ ನಿರೀಕ್ಷೆಯಿದೆ.
ಈ ಮುಕ್ತ ವ್ಯಾಪಾರ ಒಪ್ಪಂದದಿಂದ ದೇಶದ ಜನಸಂಖ್ಯೆಯ ಸುಮಾರು ಶೇ. 44ರಷ್ಟು ಇರುವ ಭಾರತೀಯ ರೈತರು ಅತಿ ದೊಡ್ಡ ಲಾಭವನ್ನು ಪಡೆಯಲಿದ್ದಾರೆ. ಅಧಿಕೃತವಾಗಿ ಸಮಗ್ರ ಆರ್ಥಿಕ ಮತ್ತು ವ್ಯಾಪಾರ ಒಪ್ಪಂದ ಎಂದು ಕರೆಯಲ್ಪಡುವ ಈ ಒಪ್ಪಂದದಿಂದ ಸುಮಾರು ಶೇ. 95ರಷ್ಟು ಕೃಷಿ ಮತ್ತು ಸಂಸ್ಕರಿಸಿದ ಆಹಾರ ಉತ್ಪನ್ನಗಳ ಮೇಲಿನ ಸುಂಕವನ್ನು ತೆಗೆದುಹಾಕಲಾಗುತ್ತದೆ.
ಇದರಿಂದ ಭಾರತೀಯ ಉತ್ಪನ್ನಗಳಿಗೆ ಪ್ರೀಮಿಯಂ ಬ್ರಿಟನ್ ಮಾರುಕಟ್ಟೆಯ ಬಾಗಿಲು ತೆರೆಯಲಿದೆ. ಜರ್ಮನಿ, ನೆದರ್ಲ್ಯಾಂಡ್ಸ್ನಂತಹ ಐರೋಪ್ಯ ಒಕ್ಕೂಟದ ರಾಷ್ಟ್ರಗಳ ರಫ್ತುದಾರರು ಪಡೆಯುವ ಪ್ರಯೋಜನಗಳಿಗೆ ಸಮನಾದ ಅಥವಾ ಅದಕ್ಕಿಂತ ಹೆಚ್ಚಿನ ಅನುಕೂಲಗಳನ್ನು ಇದು ಭಾರತೀಯ ರೈತರಿಗೆ ಒದಗಿಸಲಿದೆ.
ಕೃಷಿ ಕ್ಷೇತ್ರದಲ್ಲಿ, ಭಾರತವು ಜಾಗತಿಕವಾಗಿ ವರ್ಷಕ್ಕೆ 36.63 ಬಿಲಿಯನ್ ಡಾಲರ್ ಮೌಲ್ಯದ ಉತ್ಪನ್ನಗಳನ್ನು ರಫ್ತು ಮಾಡಿದರೆ, ಬ್ರಿಟನ್ ಸರಿ ಸುಮಾರು ಅಷ್ಟೆ ಅಂದರೆ 37.52 ಬಿಲಿಯನ್ ಡಾಲರ್ ಮೌಲ್ಯದ ಕೃಷಿ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುತ್ತದೆ.
ಆದರೆ, ಇದರಲ್ಲಿ ಭಾರತದಿಂದ ಬ್ರಿಟನ್ ಆಮದು ಮಾಡಿಕೊಳ್ಳುತ್ತಿರುವುದು ಕೇವಲ 811 ಮಿಲಿಯನ್ ಡಾಲರ್ ಅಂದರೆ ಸುಮಾರು 6,500 ಕೋಟಿ ರೂ. ಮೌಲ್ಯದ ಉತ್ಪನ್ನಗಳನ್ನು ಮಾತ್ರ. ಹೀಗಾಗಿ ಈ ಒಪ್ಪಂದದಿಂದ ಹೆಚ್ಚಿನ ಮೌಲ್ಯದ ಕೃಷಿ ಉತ್ಪನ್ನಗಳ ರಫ್ತಿಗೆ ದೊಡ್ಡ ಅವಕಾಶ ಸೃಷ್ಟಿಯಾಗುತ್ತದೆ.
ಈ ವ್ಯಾಪಾರ ಒಪ್ಪಂದದ ಅಡಿಯಲ್ಲಿ, ಹಣ್ಣುಗಳು, ತರಕಾರಿಗಳು, ಧಾನ್ಯಗಳು, ಉಪ್ಪಿನಕಾಯಿ, ಮಸಾಲೆ ಮಿಶ್ರಣಗಳು, ಹಣ್ಣಿನ ತಿರುಳುಗಳು, ಸಿದ್ಧ ಆಹಾರಗಳು ಮತ್ತು ಸಂಸ್ಕರಿಸಿದ ಆಹಾರಗಳಂತಹ ಕೃಷಿ ಉತ್ಪನ್ನಗಳ ಮೇಲೆ ಶೂನ್ಯ ಸುಂಕ ವಿಧಿಸಲಾಗುತ್ತದೆ. ಇದರಿಂದ ಬ್ರಿಟನ್ನಲ್ಲಿ ಈ ಸರಕುಗಳ ಬೆಲೆ ಕಡಿಮೆಯಾಗಿ, ಭಾರತೀಯ ರೈತರಿಗೆ ಅಲ್ಲಿನ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಗಲು ಸಹಾಯವಾಗಲಿದೆ.