
ದುಬೈ ಇಂಟರ್ ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಪಾಕಿಸ್ತಾನ ವಿರುದ್ದದ ಪಂದ್ಯದಲ್ಲಿ ಭಾರತ 6 ವಿಕೆಟ್ಗಳ ಜಯ ಗಳಿಸಿದೆ. ಆ ಮೂಲಕ 2017ರ ಫೈನಲ್ನಲ್ಲಿ ಎದುರಾಗಿದ್ದ ಸೋಲನ್ನು ಈ ಪಂದ್ಯದಲ್ಲಿ ಗೆಲ್ಲುವ ಮೂಲಕ ಸೇಡು ತೀರಿಸಿಕೊಂಡಿದೆ. ಟಾಸ್ ಗೆದ್ದ ಪಾಕ್ ನಾಯಕ ರಿಜ್ವಾನ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಆರಂಭಿಕರಾಗಿ ಕಣಕ್ಕಿಳಿದ ಇಮಾಮ್ ಉಲ್ ಹಕ್ (10),ಬಾಬರ್ ಅಜಂ(23),ಮೊದಲ 10 ಓವರ್ಗಳಲ್ಲೇ ಔಟ್ ಆದರು. ಇಮಾಮ್ ಅನಗತ್ಯ ರನ್ ಗಳಿಸಲು ಹೋಗಿ ರನ್ ಔಟ್ ಆದರು. ಇಬ್ಬರು ಆರಂಭಿಕರನ್ನು ಕಳೆದುಕೊಂಡ ಪಾಕಿಸ್ತಾನಕ್ಕೆ ಆಸರೆಯಾಗಿದ್ದು ಸೌದ್ ಶಕೀಲ್ (62) 76 ಎಸೆತಗಳಲ್ಲಿ 5 ಪೋರ್ನೊಂದಿಗೆ ತಾಳ್ಮೆಯ ಆಟಕ್ಕೆ ಹೊಂದಿಕೊಂಡರು. ಶಕೀಲ್ಗೆ ನಾಯಕ ರಿಜ್ವಾನ್ (46) ಸಲ್ಮಾನ್ ಆಘಾ (19), ಖುಷ್ದಿಲ್(38) ಸಾಥ್ ಕೊಟ್ಟರು. ಅಂತಿಮವಾಗಿ ಪಾಕಿಸ್ತಾನ ಒಂದು ಕಡೆ ವಿಕೆಡ್ ಕಳೆದುಕೊಳ್ಳುತ್ತಿದ್ದಂತೆ ಸೌದ್ ಶಕೀಲ್ ಕೂಡ ಹಾರ್ದಿಕ್ ಪಾಂಡ್ದಗೆ ವಿಕೆಟ್ ಒಪ್ಪಿಸಿದರು. ಬೌಲಿಂಗ್ನಲ್ಲಿ ಭಾರತ ಪರ ಹರ್ಷಿತ್ ರಾಣಾ, ಅಕ್ಷರ್ ಪಟೇಲ್ , ರವೀಂದ್ರ ಜಡೇಜಾ ತಲಾ 1 ವಿಕೆಟ್ ಪಡೆದರೆ, ಹಾರ್ದಿಕ್ ಪಾಂಡ್ಯ 2, ಹಾಗೂ ಕುಲ್ದೀಪ್ ಯಾದವ್ 3 ವಿಕೆಟ್ ಪಡೆದು ಮಿಂಚಿದರು.

ಭಾರತಕ್ಕೆ ಆರಂಭಿಕ ಆಘಾತ
242 ರನ್ಗಳ ಸಾಧಾರಣ ಮೊತ್ತ ಬೆನ್ನತ್ತಿದ್ದ ಭಾರತಕ್ಕೆ ಆರಂಭದಲ್ಲೇ ನಾಯಕ ರೋಹಿತ್ ಶರ್ಮಾ(20) ಅವರ ವಿಕೆಟ್ ಕಳೆದುಕೊಂಡಿತ್ತು. ಶಾಹೀನ್ ಆಫ್ರಿದಿ ಅವರ ಬೌಲಿಂಗ್ನಲ್ಲಿಔಟ್ ಆಗಿ ಪೆವಿಲಿಯನ್ ಸೇರಿದರು. ನಂತರ ಶುಭಮಾನ್ ಗಿಲ್ ಜೊತೆ ಸೇರಿಕೊಂಡ ವಿರಾಟ್ ಕೊಹ್ಲಿ ತಾಳ್ಮೆಯ ಆಟವಾಡಿ 69 ರನ್ಗಳ ಜೊತೆಯಾಟವಾಡಿದರು. ಈ ಹಂತದಲ್ಲಿ ಶುಭಮಾನ್ ಗಿಲ್(46) ಅಬ್ರಾರ್ ಅಹ್ಮದ್ಗೆ ವಿಕೆಟ್ ಒಪ್ಪಿಸಿದರು. ಇತ್ತ ತಾಳ್ಮೆಯ ಆಟವಾಡುತ್ತಿದ್ದ ವಿರಾಟ್ ಕೊಹ್ಲಿ ಒಂದು ಕಡೆ ಕ್ರೀಸಿನಲ್ಲಿ ಭದ್ರವಾಗಿ ನಿಂತಿದ್ದರು. ಗಿಲ್ ಔಟ್ ಆಗುತ್ತಿದ್ದಂತೆ ಕ್ರೀಸ್ಗಿಳಿದ ಶ್ರೇಯಸ್ ಅಯ್ಯರ್ (56)ಕೂಡ ತಾಳ್ಮೆಯ ಆಟಕ್ಕೆ ಮೊರೆ ಹೋದರು. ಇವರ ಎಚ್ಚರಿಕೆಯ ಬ್ಯಾಟಿಂಗ್ನಿಂದ 114 ರನ್ಗಳ ಜೊತೆಯಾಟ ಮೂಡಿ ಬಂದಿತ್ತು. ಶ್ರೇಯಸ್ ಅಯ್ಯರ್ ಔಟ್ ಆಗುತ್ತಿದ್ದಂತೆ ಭಾರತ ಅದಾಗಲೇ ರನ್ ಚೇಸ್ನಲ್ಲಿ ಸುರಕ್ಷಿತವಾಗಿತ್ತು. ಹಾರ್ದಿಕ್ ಪಾಂಡ್ಯ(8),ಅಕ್ಷರ್ ಪಟೇಲ್ (3) ಬೇಗನೇ ಪಂದ್ಯ ಮುಗಿಸಲು ಎದುರು ನೋಡಿದರು. ಆದರೆ ಅಂತಿಮವಾಗಿ ಕೊಹ್ಲಿ ಪೋರ್ ಬಾರಿಸುವುದರೊಂದಿಗೆ ಭಾರತಕ್ಕೆ ಅಮೋಘ ಜಯ ತಂದುಕೊಟ್ಟರು. ಜೊತೆಗೆ ವೃತ್ತಿ ಜೀವನದಲ್ಲಿ 51 ಶತಕ ಪೂರೈಸಿದರು.
ಅಭಿಷೇಕ್ ಎಸ್