
ರಷ್ಯಾ ಅಧ್ಯಕ್ಷ, ರಷ್ಯಾದ ಏಕಮೇವಾದ್ವಿತೀಯ ನಾಯಕ ವ್ಲಾದಿಮಿರ್ ಪುಟಿನ್ ಕೊಲೆಗೆ ಅಂತಾಷ್ಟ್ರೀಯ ಮಟ್ಟದಲ್ಲಿ ಪಿತೂರಿ ನಡೆಯುತ್ತಿದೆಯಾ ಅನ್ನೋ ಅನುಮಾನಗಳು ಮೂಡುತ್ತಿವೆ. ಅದಕ್ಕೆ ಇಂಬು ನೀಡುವಂತೆ, ಮಾಸ್ಕೋದ FSB ಕೇಂದ್ರ ಕಚೇರಿ ಬಳಿ, ಪುಟಿನ್ʼರ ಐಶಾರಾಮಿ ಲಿಮೋಸಿನ್ ಕಾರನ್ನ ಸ್ಫೋಟಿಸಲಾಗಿದೆ. ಪುಟಿನ್ ಕಾರು ಹೊತ್ತಿ ಉರಿಯುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ..!
ಹೇಳಿ ಕೇಳಿ ರಷ್ಯಾದ ರಾಜಧಾನಿ ಮಾಸ್ಕೋ ಒಂದು ಅಭೇದ್ಯ ಕೋಟೆ, ರಷ್ಯಾ ಅಧ್ಯಕ್ಷರ ಅಧಿಕೃತ ನಿವಾಸ ಕ್ರಮ್ಲಿನ್ ಇರುವ ಸ್ಥಳ. ಹಾಗಾಗಿ ಮಾಸ್ಕೋದ ಈ ಏಳು ಸುತ್ತಿನ ಕೋಟೆಯನ್ನು ಭೇದಿಸೋದು ಯಾವ ಶತ್ರುಗಳಿಗೂ ಅಷ್ಟು ಸುಲಭಸಾಧ್ಯವಾದ ಕೆಲಸವಲ್ಲ. ಆದರೂ ಮಾಸ್ಕೋದಲ್ಲಿ ಪುಟಿನ್ ಕಾರನ್ನೇ ಸ್ಫೋಟಗೊಳಿಸಿರುವುದು, ರಷ್ಯಾ ಅಧ್ಯಕ್ಷರ ವಿರುದ್ಧದ ಸಂಚಿನ ಕಬಂಧ ಬಾಹುಗಳು, ಮಾಸ್ಕೋದವರೆಗೂ ತಲುಪಿಬಿಟ್ಟವಾ ಎಂಬ ಅನುಮಾನ ಕಾಡುತ್ತಿದೆ. ಈ ಸಂಚಿಗೆ ಒಳಗಿನ ಹಿತಶತ್ರುಗಳೇ ಕೈ ಜೋಡಿಸಿದ್ರಾ ಎನ್ನುವ ಸಂಶಯಗಳು ಮೂಡುತ್ತಿವೆ. ಪುಟಿನ್ ಕಾರಿಗೇ ಸ್ಕಚ್ ಹಾಕಿದ ಆ ಕಾಣದ ʼಕೈʼಗಳಾವುವು ಎಂದು ರಷ್ಯಾ ಗುಪ್ತಚರ ಸಂಸ್ಥೆ ತಲೆಕೆಡಿಸಿಕೊಳ್ಳುವಂತೆ ಮಾಡಿದೆ ಈ ಘಟನೆ!

ಮೊದಲೇ ಹೇಳಿದಂತೆ ರಷ್ಯಾ ರಾಜಧಾನಿ ಮಾಸ್ಕೋ ಏಳು ಸುತ್ತಿನ ಕೋಟೆ. ಅಲ್ಲಿಯೇ ಅಧ್ಯಕ್ಷ ಪುಟಿನ್ ಹತ್ಯೆಗೆ ಸಂಚು ರೂಪಿಸೋದು, ಸುಲಭದ ಮಾತಲ್ಲ. ಒಳಗಿನ ಹಿತಶತ್ರುಗಳ ಸಹಾಯವಿಲ್ಲದೆಯೇ ಅದು ಸಾಧ್ಯವಾಗೋದೂ ಇಲ್ಲ. ರಷ್ಯಾದ ಗುಪ್ತಚರ ಸಂಸ್ಥೆ KGB, ಅಧ್ಯಕ್ಷ ಪುಟಿನ್ ರಕ್ಷಣೆಗೆ ಸದಾ ಟೊಂಕಕಟ್ಟಿ ನಿಂತಿರುತ್ತದೆ. ಪುಟಿನ್ ವಿರುದ್ಧ ಈ ರೀತಿಯ ಸಂಚೊಂದು ನಡೆಯುತ್ತಿದೆ ಎನ್ನುವ ಒಂದು ಸಣ್ಣ ಸುಳಿವು ಸಿಕ್ಕರೂ, KGB ಏಜೆಂಟರು ಈ ಸಂಚನ್ನ ವಿಫಲಗೊಳಿಸಿಬಿಡುತ್ತಾರೆ. ಒಂದು ವೇಳೆ ಶತ್ರುಗಳು ಜೀವಂತವಾಗಿ ಈ KGB ಯ ಕೈಗೆ ಸಿಕ್ಕಿದರಂತೂ ಮುಗಿದೇಹೋಯ್ತು. ಅವರ ಜೊತೆ ಅಕ್ಷರಶಃ ಪೈಶಾಚಿಕವಾಗಿ ವರ್ತಿಸುತ್ತಾರೆ ರಷ್ಯನ್ನರು. ಹಾಗಾಗಿ ಎಂತಹ ಶತ್ರುವಾದ್ರೂ, ರಷ್ಯಾದ ವಿರುದ್ಧ ಏನೇ ಸಂಚು ನಡೆಸಬೇಕಂದ್ರೂ, ಒಂದು ಬಾರಿ ಯೋಚಿಸುತ್ತಾರೆ. ಆದರೂ ಈ ರೀತಿಯ ಒಂದು ಘಟನೆ ನಡೆದಿರುವುದು, ಮಾಸ್ಕೋದ ರಕ್ಷಣೆಗೇ ಒಂದು ಸವಾಲೆಸೆಯುವಂತಿದೆ!
ರಷ್ಯಾ ಅದ್ಯಕ್ಷ ಪುಟಿನ್ ಶೀಘ್ರದಲ್ಲೇ ಸಾಯುತ್ತಾರೆ ಎಂದು, ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಹೇಳಿಕೆ ನೀಡಿದ ಕೇವಲ ಎರಡು ದಿನಗಳಲ್ಲಿ ಈ ಘಟನೆ ನಡೆದಿರೋದು, ಹಲವು ಅನುಮಾನಗಳಿಗೆ ಕಾರಣವಾಗಿದೆ. ಇದು ಕಾಕತಾಳೀಯವೋ ಅಥವಾ ಪೂರ್ವನಿರ್ಧರಿತವೋ ಎಂಬ ಚರ್ಚೆ ಹುಟ್ಟುಹಾಕಿದೆ. ಝೆಲೆನ್ಸ್ಕಿ ಅಷ್ಟು ಆತ್ಮವಿಶ್ವಾಸದಿಂದ ಪುಟಿನ್ ಸಾವಿನ ಬಗ್ಗೆ ಹೇಳಿಕೆ ನೀಡಿರೋದನ್ನ ನೋಡಿದ್ರೆ, ಝೆಲೆನ್ಸ್ಕಿಗೆ ಈ ಬಗ್ಗೆ ಮೊದಲೇ ಮಾಹಿತಿ ಇತ್ತಾ!? ಅಥವಾ ಝೆಲೆನ್ಸ್ಕಿಯೂ ಈ ಸಂಚಿನಲ್ಲಿ ಪಾಲುದಾರನಾ ಎಂಬ ಪ್ರಶ್ನೆಗಳನ್ನ ಹುಟ್ಟುಹಾಕ್ತಾ ಇದೆ. ಇದಕ್ಕೆ ಕಾರಣವೂ ಇಲ್ಲದಿಲ್ಲ. ಹೇಳಿಕೇಳಿ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಪಾಶ್ಚಿಮಾತ್ಯ ದೇಶಗಳ ಬಗ್ಗೆ ಒಲವಿರೋ ನಾಯಕ. ಇಂತಹ ಝೆಲೆನ್ಸ್ಕಿ ಪಾಶ್ಚಿಮಾತ್ಯ ದೇಶಗಳ ಜೊತೆಗೂಡಿ, ಪುಟಿನ್ ವಿರುದ್ಧದ ಇಂತಹ ಒಂದು ಸಂಚಿನಲ್ಲಿ ಭೌಗಿಯಾಗಿದ್ದರೂ ಅಚ್ಚರಿಯಿಲ್ಲ ಎನ್ನುವ ಮಾತುಗಳೂ ಕೇಳಿಬರ್ತಿವೆ. ರಷ್ಯಾ ವಿರುದ್ಧದ ಯುದ್ಧದಿಂದ ಬಸವಳಿದು ಹೋಗಿರುವ ಝೆಲೆನ್ಸ್ಕಿಗೆ, ಪರಿಸ್ಥಿತಿ ಈ ರೀತಿಯ ಸಂಚಿನಲ್ಲಿ ಭಾಗಿಯಾಗಲೇಬೇಕಾದ ಅನಿವಾರ್ಯತೆಯನ್ನು ಸೃಷ್ಟಿಸಿರುವುದೂ ಸುಳ್ಳಲ್ಲ. ಯಾಕಂದ್ರೆ,
ರಷ್ಯಾ-ಉಕ್ರೇನ್ ಯುದ್ಧ ಆರಂಭವಾಗಿ, ಬರೋಬ್ಬರಿ ಮೂರು ವರ್ಷಗಳೇ ಕಳೆದುಹೋಗಿವೆ. ಆದರೂ ಈ ಕೂಡಲೇ ಯುದ್ಧ ನಿಲ್ಲುವ ಲಕ್ಷಣಗಳು ಕಾಣುತ್ತಿಲ್ಲ. ಒಂದು ವೇಳೆ ಅಮೆರಿಕಾದ ಮಧ್ಯಸ್ಥಿಕೆಯಲ್ಲಿ ಈಗ ಈ ಯುದ್ಧ ನಿಂತರೂ, ಮುಂದೆ ಪುಟಿನ್ ಮತ್ತೆ ಉಕ್ರೇನ್ ಮೇಲೆ ದಾಳಿ ಮಾಡುವುದಿಲ್ಲ ಅನ್ನುವುದಕ್ಕೇ ಏನು ಗ್ಯಾರಂಟಿ.!? ಅದಕ್ಕೋಸ್ಕರ ಈ ಪುಟಿನ್ʼನನ್ನೇ ಇಲ್ಲವಾಗಿಸಿಬಿಟ್ಟ್ರೆ ಇದಕ್ಕೆಲ್ಲ ಒಂದು ಇತಿಶ್ರೀ ಹಾಡಬಹುದು ಅನ್ನೋದು ಝೆಲೆನ್ಸ್ಕಿಯ ಯೋಚನೆಯೂ ಇರಬಹುದು. ಹಾಗಾಗಿ ಪಾಶ್ಚಿಮಾತ್ಯ ದೇಶಗಳ ಜೊತೆ ಸೇರಿಕೊಂಡು, ಝೆಲೆನ್ಸ್ಕಿ ಇಂತಹ ದುಸ್ಸಾಹಸಕ್ಕೆ ಕೈ ಹಾಕಿದ್ದರೂ ಅಚ್ಚರಿಪಡಬೇಕಿಲ್ಲ..!
ಅಷ್ಟಕ್ಕೂ ಈ ಪುಟಿನ್ ಎಂಬ ಸರ್ವಾಧಿಕಾರಿಯನ್ನು ಮುಗಿಸೋದು ಅಷ್ಟು ಸುಲಭದ ಮಾತೂ ಅಲ್ಲ. 2012ರಿಂದಲೂ ರಷ್ಯಾ ಅಧ್ಯಕ್ಷರಾಗಿರುವ ಪುಟಿನ್, ಒಂದು ರೀತಿಯಲ್ಲಿ ಸರ್ವಾಧಿಕಾರಿಯೇ! ರಷ್ಯಾದ ಸಂವಿದಾನದಲ್ಲೇ ಬದಲಾವಣೆ ತಂದು, ತಾನು ಬದುಕಿರುವವರೆಗೂ ರಷ್ಯಾದ ಅಧ್ಯಕ್ಷರಾಗಿ ಮುಂದುವರೆಯಲು ಏನೇನು ತಯಾರಿ ಮಾಡಿಕೊಳ್ಳಬೇಕೋ, ಅದೆಲ್ಲವನ್ನೂ ಈಗಾಗಲೇ ಮಾಡಿಕೊಂಡಿದ್ದಾರೆ ಪುಟಿನ್. ರಷ್ಯಾದಲ್ಲಿ ಚುನಾವಣೆಗಳೇನಿದ್ದರೂ ನಾಮಕಾವಸ್ಥೆಗೆ ನಡೆಯುತ್ತವೆ. ಪುಟಿನ್ ಆಪ್ತ ವಲಯದಲ್ಲಿರುವವರೇ ಅಲ್ಲಿ ಪುಟಿನ್ ವಿರುದ್ಧ ಚುನಾವಣೆಗೆ ಸ್ಪರ್ಧೀಸುತ್ತಾರೆ, ಸಹಜವಾಗಿ ಪುಟಿನ್ನೇ ಚುನಾವಣೆಯಲ್ಲಿ ಜಯಗಳಿಸುತ್ತಾರೆ. ಅಲ್ಲಿ ಪುಟಿನ್ ವಿರುದ್ಧ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧೀಸುವುದು ಯಾರಿಗೂ ಅಷ್ಟು ಸುಲಭವಾಗಿ ಸಾಧ್ಯವಿಲ್ಲ. ಸರ್ವಾಧಿಕಾರಿ ಮನೋಭಾವದ ಪುಟಿನ್, ತಮ್ಮ ಎದುರಾಳಿಗಳನ್ನು ಸಹಿಸುವ ವ್ಯಕ್ತಿಯಲ್ಲ. ಇದೇ ಕಾರಣಕ್ಕೆ ಪುಟಿನ್ ವಿರುದ್ಧ ರಷ್ಯಾದಲ್ಲಿ, ಈಗಾಗಲೇ ಹಲವು ಬಾರಿ ಪ್ರತಿಭಟನೆಗಳು ನಡೆದರೂ, ಅವೆಲ್ಲವನ್ನೂ ನಿರ್ದಾಕ್ಷಿಣ್ಯವಾಗಿ ಮಟ್ಟಹಾಕಿದ್ದಾರೆ ಪುಟಿನ್. ಹಾಗೊಂದು ವೇಳೆ ಪುಟಿನ್ ವಿರುದ್ಧ ಯಾವುದೋ ಒಬ್ಬ ನಾಯಕ ಪ್ರಬಲವಾಗಿ ಬೆಳೆದ ಅಂತಿಟ್ಟುಕೊಳ್ಳಿ, ಅಲ್ಲಿಗೆ ಆತನ ಆಯಸ್ಸು ಮುಗಿದಿದೆ ಅಂತಲೇ ಅರ್ಥ..!

ಈ ಮಾತು ಹೇಳುವುದಕ್ಕೂ ಕಾರಣವಿದೆ. ಇತ್ತೀಚಿನ ವರ್ಷಗಳಲ್ಲಿ ರಷ್ಯಾದಲ್ಲಿ ಅಲಿಕ್ಸಿ ನೊವೆಲ್ನಿ ಎಂಬ ನಾಯಕ ಪುಟಿನ್ʼರ ಕಡು ವಿರೋಧಿಯಾಗಿ ಗುರುತಿಸಿಕೊಂಡಿದ್ದ. ವೃತ್ತಿಯಲ್ಲಿ ವಕೀಲನಾಗಿದ್ದ ಈತ, ಸಾಮಾಜಿಕ ಹೋರಾಟಗಾರ ಹಾಗೂ ರಷ್ಯಾದ Anri Corruption Foundationನ ಸಂಸ್ಥಾಪಕನೂ ಆಗಿದ್ದ. ರಷ್ಯಾದಲ್ಲಿ ನಡೆಯುತ್ತಿದ್ದ ಪುಟಿನ್ ವಿರುದ್ಧದ ಭಾರೀ ಪ್ರತಿಭಟನೆಗಳ ನೇತೃತ್ವ ವಹಿಸುತ್ತಿದ್ದವನು ಇದೇ ನೊವೆಲ್ನಿ! ಪುಟಿನ್ ವಿರುದ್ಧ ರಷ್ಯಾದಲ್ಲಿ ಒಂದು ಜನಾಂದೋಲನವನ್ನೇ ರೂಪಿಸುತ್ತಿದ್ದ ಈ ಅಲೆಕ್ಸಿ ನೊವೆಲ್ನಿ, ರಷ್ಯಾದ ಅಧ್ಯಕ್ಷೀಯ ಚುನಾವಣೆಯಲ್ಲಿಯೂ ಪುಟಿನ್ ವಿರುದ್ಧ ಸ್ಪರ್ಧಿಸುವ ಪ್ರಯತ್ನ ಮಾಡಿದ್ದ. ಯಾವಾಗ ಈ ನೊವೆಲ್ನಿರಷ್ಯಾದಲ್ಲಿ ಜನಪ್ರಿಯತೆಗಳಿಸಲು ಪ್ರಾಂರಭಿಸಿದನೋ, ಅದು ಪುಟಿನ್ ಕಣ್ಣು ಕೆಂಪಗಾಗಿಸಿತ್ತು. ಭ್ರಷ್ಟಾಚಾರದ ಅರೋಪ ಹೊರಿಸಿ ಈತನನ್ನ ಜೈಲಿಗೆ ತಳ್ಳಲಾಯ್ತು. ತನ್ನ ಜೀವಕ್ಕೆ ಅಪಾಯವಿದೆ ಎಂದು ಪದೇ ಪದೇ ಆರೋಪಿಸುತ್ತಿದ್ದ ನೊವೆಲ್ನಿಗೆ, ಒಮ್ಮೆ ವಿಷಪ್ರಾಶನವೂ ಆಗಿತ್ತು. ಒಮ್ಮಲೆ ಯಾವ ಪರೀಕ್ಷೆಯಿಂದಲೂ ಕಂಡುಹಿಡಿಯಲು ಸಾಧ್ಯವಾಗದಂತಹ Slow Poison ನೊವೆಲ್ನಿಯ ದೇಹ ಸೇರಿತ್ತು. ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ನೊವೆಲ್ನಿಯನ್ನು, ತಕ್ಷನ ಜರ್ಮನಿಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿ ಬದುಕಿಸಲಾಯ್ತು. ಆದರೇನು, ಇಂತಹ ಪುಟಿನ್ ವಿರೋಧೀ ನಾಯಕನಿಗೆ ರಷ್ಯಾದಲ್ಲಿ ಹೆಚು ದಿನ ಬದುಕುವ ಅದೃಷ್ಟವಿರಲಿಲ್ಲ. ಭ್ರಷದಟಾಚಾರ ಆರೋಪದಡಿಯಲ್ಲಿ ಬಂಧಿತನಾಗಿದ್ದ ಅಲಿಕ್ಸಿ ನೊವೆಲ್ನಿ, 16 ಫೆಬ್ರುವರಿ 2024ರಂದಯ ರಷ್ಯಾದ ಕಾರಾಗೃಹದಲ್ಲೇ ನಿಗೂಢವಾಗಿ ಸಾವಿಗೀಡಾಗಿದ್ದ. ಅಲ್ಲಿಗೆ ಪುಟಿನ್ ವಿರುದ್ಧವಿದ್ದ ಮತ್ತೊಂದು ಧ್ವನಿಯ ಸದ್ದಡಗಿತ್ತು..!
ಪುಟಿನ್ ವಿರುದ್ಧದ ಕೊಲೆ ಸಂಚು ಇಲ್ಲಿಗೇ ನಿಲ್ಲುವ ಯಾವುದೇ ಲಕ್ಷಣಗಳೂ ಕಾಣುತ್ತಿಲ್ಲ. ಈ ಹಿಂದೆ ಹಲವು ಬಾರಿ ಪುಟಿನ್ ಹತ್ಯೆಗೆ ಸಂಚು ನಡೆದಿತ್ತಾದರೂ, ರಷ್ಯಾ ಉಕ್ರೇನ್ ಮೇಲೆ ಯುದ್ಧ ಸಾರಿದಾಗಿನಿಂದ, ಪುಟಿನ್ ಹತ್ಯೆಯ ಸಂಚುಗಳು ತೀವ್ರಗೊಂಡಿವೆ. ಶತಾಯಗತಾಯ ಪುಟಿನ್ ಜೀವ ತೆಗೆಯಲೇಬೇಕು ಎಂದು ಕಾಣದ ಕೈಗಳು ಶತಪ್ರಯತ್ನ ನಡೆಸುತ್ತಿವೆ. ಈ ಅಂತಾರಾಷ್ಟ್ರೀಯ ವ್ಯೂಹದೊಳಕ್ಕೆ ಸಿಲುಕಿ ಪುಟಿನ್ ಬಚಾವಾಗ್ತಾರಾ, ಇಲ್ಲವಾ ಎಂಬ ಪ್ರಶ್ನೆಗಳಿಗೆ ಸದ್ಯಕ್ಕೆ ಯಾವುದೇ ಉತ್ತರವಿಲ್ಲ..!