
Ashwaveega News 24×7 ಅ. 11: ಸಹಕಾರ ಸಚಿವ ಕೆ.ಎನ್. ರಾಜಣ್ಣ ಅವರು ಮಧ್ಯಾಹ್ನದ ನಂತರ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಸರ್ಕಾರದಿಂದ ರಾಜಣ್ಣ ಅವರ ರಾಜೀನಾಮೆಯನ್ನು ಅಂಗೀಕಾರ ಮಾಡಲಾಗಿತ್ತು. ಆದರೆ, ಇದಾದ ನಂತರ ರಾಜಣ್ಣ ಅವರಿಂದ ರಾಜೀನಾಮೆ ಪಡೆಯದೇ ಸಚಿವ ಸಂಪುಟದಿಂದ ಉಚ್ಛಾಟನೆ ಮಾಡಲಾಗಿದೆ. ಈ ಮೂಲಕ ಸಚಿವರೊಬ್ಬರನ್ನು ಹೀನಾಯವಾಗಿ ಪಕ್ಷದ ಸಂಪುಟದಿಂದ ಹೊರಗೆ ಹಾಕಲಾಗಿದೆ.
ರಾಜಣ್ಣ ರಾಜೀನಾಮೆ ಕೊಡುವುದಕ್ಕೂ ಮುನ್ನವೇ ಸಚಿವ ಸಂಪುಟದಿಂದ ವಜಾ ಮಾಡುವುದಕ್ಕೆ ರಾಜ್ಯಪಾಲರಿಗೆ ಪತ್ರವನ್ನು ರವಾನಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯಪಾಲರ ಅನುಮೋದನೆಯೊಂದಿಗೆ ರಾಜಭವನದ ವಿಶೇಷ ಕಾರ್ಯದರ್ಶಿ ಆರ್. ಪ್ರಭುಶಂಕರ್ ಅವರು, ‘ಮುಂದಿನ ಅಗತ್ಯ ಕ್ರಮಕ್ಕಾಗಿ, ಮಾನ್ಯ ಸಹಕಾರ ಸಚಿವ ಶ್ರೀ.ಕೆ.ಎನ್.ರಾಜಣ್ಣ ಅವರನ್ನು ಸಚಿವ ಸಂಪುಟದಿಂದ ತಕ್ಷಣದಿಂದ ಜಾರಿಗೆ ಬರುವಂತೆ ತೆಗೆದುಹಾಕುವ (ವಜಾ ಮಾಡುವ) ಕುರಿತು ಮಾನ್ಯ ರಾಜ್ಯಪಾಲರು ಸಹಿ ಮಾಡಿದ ಮೂಲ ಅಧಿಸೂಚನೆಯನ್ನು ಇದರೊಂದಿಗೆ ಕಳುಹಿಸಲು ನನಗೆ ನಿರ್ದೇಶಿಸಲಾಗಿದೆ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಸೂಚನೆ ನೀಡಿದ್ದಾರೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕಳೆದ ಲೋಕಸಭಾ ಚುನಾವಣೆಯಲ್ಲಿ ವೋಟರ್ ಐಡಿ ಮತ್ತು ಮತದಾನ ವಿಚಾರದಲ್ಲಿ ಅಕ್ರಮ ನಡೆದಿದೆ ಎಂದು ಹೋರಾಟ ಮಾಡಿದ್ದರು. ದೇಶದಾದ್ಯಂತ ದೊಡ್ಡ ಹೋರಾಟವನ್ನು ಮಾಡುವುದಕ್ಕೆ ಕರ್ನಾಟಕವನ್ನೇ ಮೊದಲ ವೇದಿಕೆಯನ್ನಾಗಿ ಬಳಕೆ ಮಾಡಿಕೊಂಡಿದ್ದರು. ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿ ಭಾರೀ ಬೆಂಬಲ ವ್ಯಕ್ತವಾಗುವ ನಿರೀಕ್ಷೆಯಲ್ಲಿದ್ದರು.
ಆದರೆ, ಸ್ವತಃ ಕಾಂಗ್ರೆಸ್ ಸರ್ಕಾರದ ಪ್ರಭಾವಿ ಖಾತೆಯಲ್ಲಿರುವ ಸಚಿವ ಕೆ.ಎನ್. ರಾಜಣ್ಣ ಅವರೇ ತಮ್ಮ ಪಕ್ಷ ಸುಪ್ರೀಂ ನಾಯಕನಾದ ರಾಹುಲ್ ಗಾಂಧಿ ನಡೆಗೆ ವಿರುದ್ಧವಾಗಿ ಮಾತನಾಡಿದ್ದರು. ರಾಜಣ್ಣ ಅವರ ಮಾತನ್ನು ವಿರೋಧಿಸಿ ಸ್ವಪಕ್ಷೀಯ ನಾಯಕರು ಇದನ್ನು ರಾಜ್ಯ ಉಸ್ತುವಾರಿ ಸುರ್ಜೇವಾಲಾ ಅವರಿಗೆ ಪತ್ರದ ಮುಖೇನ ದೂರು ನೀಡಿದ್ದರು. ಇದರ ಬೆನ್ನಲ್ಲಿಯೇ ಹೈಕಮಾಂಡ್ನಿಂದ ಸಚಿವ ಸಂಪುಟದಿಂದ ವಜಾ ಮಾಡುವುದಕ್ಕೆ ಆದೇಶ ಬಂದಿದೆ.