Ashwaveega News 24×7 ಫೆಬ್ರವರಿ 15 -2026 – ಹಾಸನ : ಮದುವೆಗೆ ಹೋಗಿ ವಾಪಸ್ ಮನೆಗೆ ಬರುತ್ತಿದ್ದ ವೇಳೆ ನಾಪತ್ತೆಯಾಗಿದ್ದ ಮಹಿಳೆ ಪ್ರಿಯಾಂಕಾ ಪ್ರಕರಣಕ್ಕೆ ರೋಚಕ ತಿರುವು ಸಿಕ್ಕಿದೆ. ಹಾಸನ ಜಿಲ್ಲೆಯ ಕಲ್ಕೆರೆ ಗ್ರಾಮದ ನಿವಾಸಿಯಾಗಿದ್ದ ಪ್ರಿಯಾಂಕಾ, ಇದೀಗ ಪ್ರಿಯಕರನ ಜೊತೆ ಕುಣಿಗಲ್ನಲ್ಲಿ ಪತ್ತೆಯಾಗಿದ್ದಾಳೆ.
ಮದುವೆ ಸಮಾರಂಭಕ್ಕೆ 30 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಧರಿಸಿ ಬಂದಿದ್ದ ಪ್ರಿಯಾಂಕಾ, ಮನೆಗೆ ಮರಳುವಾಗ ಏಕಾಏಕಿ ನಾಪತ್ತೆಯಾಗಿದ್ದಳು. ಕೆರೆ ಸಮೀಪ ಮಹಿಳೆಯ ಬಟ್ಟೆ, ಬ್ಯಾಗ್, ಚಪ್ಪಲಿ ಸಿಕ್ಕಿದ್ದರಿಂದ ಕೊಲೆ ಶಂಕೆ ವ್ಯಕ್ತವಾಗಿತ್ತು. ಪೊಲೀಸರು ವ್ಯಾಪಕ ಶೋಧ ಕಾರ್ಯ ನಡೆಸಿದ್ದರು.
ಹೆಂಡತಿಗಾಗಿ ಅಲೆದಾಡುತ್ತಿದ್ದ ಗಂಡನಿಗೆ ಇದು ದೊಡ್ಡ ಶಾಕ್ ಆಗಿದೆ. ತನಿಖೆ ತೀವ್ರಗೊಳಿಸಿದ ಪೊಲೀಸರು ಇಂದು ಕುಣಿಗಲ್ನಲ್ಲಿ ಪ್ರಿಯಾಂಕಾಳನ್ನು ಪ್ರಿಯಕರ ಡೆವಿಡ್ ಮನೆಯಲ್ಲಿ ಪತ್ತೆಹಚ್ಚಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಂತೆ, ಕುಣಿಗಲ್ನೊಂದೇ ಖಾಸಗಿ ಕಂಪನಿಯಲ್ಲಿ ಡೆವಿಡ್ ಹಾಗೂ ಪ್ರಿಯಾಂಕಾ ಕೆಲಸ ಮಾಡುತ್ತಿದ್ದರು. ಕೆಲಸದ ವೇಳೆಯಲ್ಲೇ ಇವರಿಬ್ಬರ ನಡುವೆ ಪರಿಚಯ ಬೆಳೆದು ಸಂಬಂಧ ಗಾಢವಾಗಿತ್ತು .
ಪ್ರಿಯಕರ ಡೆವಿಡ್ಗಾಗಿ ಗಂಡನಿಗೆ ಕೈಕೊಟ್ಟು, ಚಿನ್ನಾಭರಣ ಸಮೇತ ಮನೆ ಬಿಟ್ಟು ಬಂದಿರುವುದು ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಪ್ರಿಯಾಂಕಾ ಹಾಗೂ ಡೆವಿಡ್ರನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಪ್ರಕರಣದ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
