
Ashwaveega News 24×7 ಅಕ್ಟೋಬರ್. 06: ಸುಪ್ರೀಂ ಕೋರ್ಟ್ ಹಿರಿಯ ವಕೀಲರೊಬ್ಬರು ಮುಖ್ಯ ನ್ಯಾಯಮೂರ್ತಿ ಬಿ ಆರ್ ಗವಾಯಿ ಅವರ ಮೇಲೆ ಶೂ ಎಸೆಯಲು ಮುಂದಾದ ಘಟನೆ ಇಂದು ನಡೆದಿದೆ.
ಮಧ್ಯಪ್ರದೇಶದ ಖಜುರಾಹೊ ದೇವಾಲಯ ಸಂಕೀರ್ಣದಲ್ಲಿ ವಿಷ್ಣುವಿನ ವಿಗ್ರಹವನ್ನು ಪುನಃಸ್ಥಾಪಿಸಲು ಕೋರಿ ಸಲ್ಲಿಸಲಾದ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ನಾ. ಬಿ ಆರ್ ಗವಾಯಿ ಅವರು ವ್ಯಕ್ತಪಡಿಸಿದ ಅಭಿಪ್ರಾಯಕ್ಕೆ ಸಿಟ್ಟಾಗಿ 71 ವರ್ಷದ ಕಿಶೋರ್ ರಾಕೇಶ್ ಶೂ ಎಸೆಯಲು ಮುಂದಾಗಿದ್ದರು.
ಕೋರ್ಟ್ ಹಾಲ್ನಲ್ಲಿ ಕಿಶೋರ್ ರಾಕೇಶ್ ಶೂ ತೆಗೆಯುತ್ತಿದ್ದಾಗ ಅಲ್ಲಿದ್ದ ಭದ್ರತಾ ಸಿಬ್ಬಂದಿ ಮಧ್ಯಪ್ರವೇಶಿಸಿ ವಕೀಲರನ್ನು ತಡೆದು ಹೊರಗೆ ಕರೆದುಕೊಂಡು ಹೋಗಿದ್ದಾರೆ. ಕರೆದುಕೊಂಡು ಹೋಗುವಾಗ ಸನಾತನ ಧರ್ಮಕ್ಕೆ ಅವಮಾನ ಮಾಡುವುದನ್ನು ನಾನು ಸಹಿಸುವುದಿಲ್ಲ ಎಂದು ಕೂಗಿಕೊಂಡು ಹೋಗಿದ್ದಾರೆ.
ಈ ವೇಳೆ ಸಿಜೆಐ ಯಾವುದೇ ಯಾವುದೇ ಮುಜುಗರಕ್ಕೊಳಗಾಗದೇ ನ್ಯಾಯಾಲಯದಲ್ಲಿ ಹಾಜರಿದ್ದ ವಕೀಲರಿಗೆ ತಮ್ಮ ವಾದಗಳನ್ನು ಮುಂದುವರಿಸುವಂತೆ ಕೇಳಿಕೊಂಡರು. ಈ ಘಟನೆಯಿಂದ ವಿಚಲಿತರಾಗಬೇಡಿ. ನಾವು ವಿಚಲಿತರಾಗುವುದಿಲ್ಲ. ಈ ವಿಷಯಗಳು ನನ್ನ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಹೇಳಿ ಕಲಾಪ ಮುಂದುವರಿಸಿದರು.
ದೆಹಲಿ ಡಿಸಿಪಿ ಮತ್ತು ಸುಪ್ರೀಂ ಕೋರ್ಟ್ ಭದ್ರತಾ ಅಧಿಕಾರಿಗಳು ಕಿಶೋರ್ ರಾಕೇಶ್ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.