
lovers died in belagavi district family of boy suspects its a murder
ಆಟೋದಲ್ಲೇ ಯುವಕ – ಯುವತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗೋಕಾಕ್ ತಾಲೂಕಿನ ಚಿಕ್ಕನಂದಿ ಗ್ರಾಮದ ಹೊರ ವಲಯದಲ್ಲಿ ಇಂದು (ಮಂಗಳವಾರ) ಬೆಳಗ್ಗೆ ನಡೆದಿದೆ.
ಸವದತ್ತಿ ತಾಲೂಕಿನ ಮುನವಳ್ಳಿ ಪಟ್ಟಣದ 28 ವರ್ಷ ವಯಸ್ಸಿನ ರಾಘವೇಂದ್ರ ಜಾಧವ್ ಮತ್ತು 26ರ ಪ್ರಾಯದ ರಂಜೀತಾ ಚೋಬರಿ ಮೃತ ಪ್ರೇಮಿಗಳು. ಈ ಇಬ್ಬರು ಆಟೋದಲ್ಲೇ ಸಾವಿಗೆ ಶರಣಾಗಿದ್ದಾರೆ. ಈ ಪ್ರೇಮಿಗಳು ಹಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು.
ಆದರೆ, ಇದಕ್ಕೆ ಯುವತಿ ಪೋಷಕರ ವಿರೋಧವಿತ್ತು. ಹಾಗಾಗಿ, 15 ದಿನದ ಹಿಂದೆಯಷ್ಟೇ ಬೇರೊಬ್ಬ ಹುಡುಗನ ಜೊತೆಗೆ ರಂಜೀತಾ ನಿಶ್ಚಿತಾರ್ಥ ಮಾಡಿದ್ದರು. ಇದರಿಂದ ಮನನೊಂದು ಇಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಪ್ರಾಥಮಿಕ ಮಾಹಿತಿ ತಿಳಿದು ಬಂದಿದೆ. ಸ್ಥಳಕ್ಕೆ ಗೋಕಾಕ್ ಗ್ರಾಮೀಣ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇಂದು ಬೆಳಗ್ಗೆ ಇಬ್ಬರು ಒಂದೇ ಆಟೋದಲ್ಲಿ ಬಂದಿದ್ದರು. ಚಿಕ್ಕನಂದಿ ಗ್ರಾಮದ ಹೊರ ವಲಯದಲ್ಲಿ ನಿರ್ಜನ ಪ್ರದೇಶದಲ್ಲಿ ಬಂದು ಆಟೋದಲ್ಲೇ ಆತ್ಮಹತ್ಯೆಗೆ ಶರಣಾಗಿದ್ದು, ಹೆಚ್ಚಿನ ಮಾಹಿತಿ ಗೊತ್ತಾಗಬೇಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅವರಿಬ್ಬರು ಪ್ರೀತಿಸುತ್ತಿರುವ ವಿಚಾರ ನಮಗೆ ಗೊತ್ತಿರಲಿಲ್ಲ. ನಿನ್ನೆ ಮಧ್ಯಾಹ್ನ ರಾಘವೇಂದ್ರ ಮನೆಯಲ್ಲಿ ಊಟ ಮಾಡಿರಲಿಲ್ಲ. ಈಗ ನೋಡಿದರೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದರಲ್ಲಿ ನಮಗೆ ಸಂಶಯ ಇದೆ. ಇದು ಆತ್ಮಹತ್ಯೆ ಅಲ್ಲ, ಕೊಲೆ ಆಗಿರಬಹುದು. ಹಾಗಾಗಿ, ಸೂಕ್ತ ತನಿಖೆ ನಡೆಸುವಂತೆ ಮೃತ ಯುವಕನ ಕುಟುಂಬಸ್ಥರು ಒತ್ತಾಯಿಸಿದ್ದಾರೆ. ಗೋಕಾಕ್ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.