ದಾವಣಗೆರೆ : ಬಾಗಲಕೋಟೆ ಹಾಗೂ ದಾವಣಗೆರೆ ದಕ್ಷಿಣ ಉಪಚುನಾವಣೆಗೆ ಟಿಕೆಟ್ ಹಂಚಿಕೆ ವಿಚಾರದಲ್ಲಿ ಕಾಂಗ್ರೆಸ್ನಲ್ಲಿ ಗೊಂದಲ ಮುಂದುವರಿದಿರುವ ಬೆನ್ನಲ್ಲೇ ಹೊಸ ಬೆಳವಣಿಗೆ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಬಿಜೆಪಿ ಈಗಾಗಲೇ ತನ್ನ ಅಭ್ಯರ್ಥಿಗಳನ್ನು ಘೋಷಿಸಿರುವಾಗ, ಕಾಂಗ್ರೆಸ್ ಇನ್ನೂ ಅಂತಿಮ ತೀರ್ಮಾನಕ್ಕೆ ಬರದಿರುವುದು ಒಳರಾಜಕೀಯ ತೀವ್ರಗೊಳಿಸಿದೆ. ಈ ಹಿನ್ನೆಲೆ ಕಾಂಗ್ರೆಸ್ ಹಿರಿಯ ನಾಯಕ ರಣದೀಪ್ ಸಿಂಗ್ ಸುರ್ಜೇವಾಲ ರಾಜ್ಯಕ್ಕೆ ಆಗಮಿಸಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೊಂದಿಗೆ ಮಹತ್ವದ ಸಭೆ ನಡೆಸಲಿದ್ದಾರೆ.
ಈ ನಡುವೆ ದಾವಣಗೆರೆ ದಕ್ಷಿಣ ಕ್ಷೇತ್ರದ ಟಿಕೆಟ್ ಆಕಾಂಕ್ಷಿ, ಸಚಿವ ಮಲ್ಲಿಕಾರ್ಜುನ್ ಅವರ ಪುತ್ರ ಸಮರ್ಥ್ ನಾಮಪತ್ರ ಸಲ್ಲಿಸಲು ಮುಂದಾಗಿರುವುದು ಭಾರೀ ಕುತೂಹಲಕ್ಕೆ ಕಾರಣವಾಗಿದೆ. ಟಿಕೆಟ್ ಘೋಷಣೆಗೆ ಮುನ್ನವೇ ಈ ರೀತಿಯ ನಡೆ ಕಾಂಗ್ರೆಸ್ ಒಳಗಟ್ಟಿನ ರಾಜಕೀಯ ಚಟುವಟಿಕೆಗಳನ್ನು ಬಹಿರಂಗಪಡಿಸಿದೆ.

ಸಚಿವರ ಕುಟುಂಬದ ಈ ನಿರ್ಧಾರ ಹೈಕಮಾಂಡ್ ಮೇಲೆ ಒತ್ತಡ ಹೇರುವ ತಂತ್ರವಾಗಿರಬಹುದು ಎಂಬ ಮಾತುಗಳು ಕೇಳಿಬರುತ್ತಿವೆ. ಟಿಕೆಟ್ ಹಂಚಿಕೆ ಕುರಿತ ಅಂತಿಮ ನಿರ್ಧಾರಕ್ಕೆ ಮುನ್ನವೇ ಈ ಬೆಳವಣಿಗೆ ಪಕ್ಷದೊಳಗಿನ ಚರ್ಚೆಯನ್ನು ಮತ್ತಷ್ಟು ತೀವ್ರಗೊಳಿಸಿದೆ.
ಒಟ್ಟಿನಲ್ಲಿ, ದಾವಣಗೆರೆ ಕಾಂಗ್ರೆಸ್ ರಾಜಕೀಯದಲ್ಲಿ ಅನಿಶ್ಚಿತತೆ ಮುಂದುವರಿದಿದ್ದು, ಹೈಕಮಾಂಡ್ ಯಾವ ನಿರ್ಧಾರ ಕೈಗೊಳ್ಳುತ್ತದೆ ಎಂಬುದರತ್ತ ಎಲ್ಲರ ಗಮನ ನೆಟ್ಟಿದೆ.
