
Ashwaveega News 24×7 ಸೆ. 20: ಖ್ಯಾತ ನಟ ಮೋಹನ್ ಲಾಲ್ ಅವರಿಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಘೋಷಿಸಲಾಗಿದೆ. ಮಲಯಾಳಂ ಸ್ಟಾರ್ ನಟ ಮೋಹನ್ಲಾಲ್, ಮಲಯಾಳಂ ಮಾತ್ರವೇ ಅಲ್ಲದೆ ಭಾರತದ ಹಲವಾರು ಭಾಷೆಗಳ ಸಿನಿಮಾಗಳಲ್ಲಿ ನಟಿಸಿದ್ದಾರೆ.
ಸೆಪ್ಟೆಂಬರ್ 23 ರಂದು ನಡೆಯಲಿರುವ ರಾಷ್ಟ್ರೀಯ ಸಿನಿಮಾ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಮೋಹನ್ ಲಾಲ್ ಅವರಿಗೆ ಫಾಲ್ಕೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವಾಲಯ ಘೋಷಿಸಿದೆ.
ಫಾಲ್ಕೆ ಪ್ರಶಸ್ತಿ ಗೌರವಕ್ಕೆ ಭಾಜನರಾದ ಮಲಯಾಳಂ ಚಿತ್ರರಂಗದ ಎರಡನೇ ಕಲಾವಿದರು ಮೋಹನ್ಲಾಲ್ ಆಗಿದ್ದಾರೆ. ಈ ಹಿಂದೆ 2004ರ ಸಾಲಿನ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಮಲಯಾಳಂ ಚಿತ್ರರಂಗದ ಜನಪ್ರಿಯ ನಿರ್ದೇಶಕ ಅಡೂರು ಗೋಪಾಲಕೃಷ್ಣನ್ ಅವರಿಗೆ ನೀಡಲಾಗಿತ್ತು.
ಈಗ ಮೋಹನ್ಲಾಲ್ ಅವರಿಗೆ 2023 ರ ಸಾಲಿನ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ನೀಡಲಾಗಿದೆ. ಮೋಹನ್ ಲಾಲ್ ಅವರು ಸಿನಿಮಾ ರಂಗಕ್ಕೆ ಸಲ್ಲಿಸಿರುವ ಅಭೂತಪೂರ್ವ ಸೇವೆಯನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ.
ಮೋಹನ್ಲಾಲ್ ಅವರು ಕಳೆದ 45 ವರ್ಷಗಳಿಂದಲೂ ಸಿನಿಮಾ ರಂಗದಲ್ಲಿದ್ದಾರೆ. 1960 ರಲ್ಲಿ ಜನಿಸಿದ ಮೋಹನ್ಲಾಲ್ ಎಳವೆಯಲ್ಲಿ ನಟನೆಗಿಂತಲೂ ಕ್ರೀಡೆಯಲ್ಲಿ ಆಸಕ್ತಿ ಹೊಂದಿದ್ದವರು.
ಕುಸ್ತಿ ಪಟುವಾಗಿದ್ದ ಮೋಹನ್ಲಾಲ್, 1977-78 ರಲ್ಲಿ ಕೇರಳ ರಾಜ್ಯ ಚಾಂಪಿಯನ್ ಸಹ ಆಗಿದ್ದರು. ಆ ಬಳಿಕ ನಟನೆಯಲ್ಲಿ ಆಸಕ್ತಿ ಬೆಳೆಸಿಕೊಂಡು 1978 ರಲ್ಲಿ ಗೆಳೆಯರೊಟ್ಟಿಗೆ ಸೇರಿ ಸಿನಿಮಾ ಮಾಡಿದರು. ಆದರೆ ಅದು ಬಿಡುಗಡೆ ಆಗಲಿಲ್ಲ. ಬಳಿಕ ವಿಲನ್ ಆಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು, ಆರಂಭದ ಸುಮಾರು 25 ಸಿನಿಮಾಗಳಲ್ಲಿ ಮೋಹನ್ಲಾಲ್ ವಿಲನ್ ಪಾತ್ರಗಳಲ್ಲಿಯೇ ನಟಿಸಿದರು.
ಮೋಹನ್ ಲಾಲ್ ವಿಲನ್ ಆಗಿ ಜನಪ್ರಿಯರಾದ ಬಳಿಕ 1984 ರಲ್ಲಿ ಮೊದಲ ಬಾರಿ ನಾಯಕನಾಗಿ ನಟಿಸಿದರು. ಆ ಸಿನಿಮಾ ಹಿಟ್ ಆಗುವ ಮೂಲಕ ಮೋಹನ್ಲಾಲ್ ನಾಯಕನಾಗಿಯೇ ಮುಂದುವರೆದರು.
1980 ರಿಂದ ಈ ವರೆಗೆ ಮೋಹನ್ ಲಾಲ್ ಅವರು 400 ಸಿನಿಮಾಗಳಲ್ಲಿ ನಟಿಸಿದ್ದಾರೆ. 1986 ರಲ್ಲಿ ಒಂದೇ ವರ್ಷದಲ್ಲಿ 36 ಸಿನಿಮಾಗಳಲ್ಲಿ ಮೋಹನ್ಲಾಲ್ ನಟಿಸಿದ್ದರು. ಮೋಹನ್ ಲಾಲ್ ಅವರು ಕನ್ನಡದ ‘ಲವ್’, ‘ಮೈತ್ರಿ’ ಇನ್ನೂ ಕೆಲ ಸಿನಿಮಾಗಳಲ್ಲಿ ನಟಿಸಿದ್ದಾರೆ.