ಮೈಸೂರು : ಇಂದಿನಿಂದ 3 ದಿನಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈಸೂರು ಜಿಲ್ಲಾ ಪ್ರವಾಸ ಕೈಗೊಂಡಿದ್ದು, ಮೈಸೂರಿನ ವಿಮಾನ ನಿಲ್ದಾಣದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದರು, ನನ್ನ ಮೇಲೆ ತಾಯಿ ಚಾಮುಂಡೇಶ್ವರಿ ಆಶೀರ್ವಾದ ಸದಾ ಇರುತ್ತೆ. ಜನರು ಅವಕಾಶ ಮಾಡಿಕೊಟ್ಟಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಇದರಿಂದ ಇಷ್ಟೊಂದು ಬಾರಿ ಚಾಮುಂಡೇಶ್ವರಿ ದೇವಿಗೆ ಪುಷ್ಪಾರ್ಚನೆ ಮಾಡಲು ಅವಕಾಶ ಸಿಕ್ಕಿದ್ದು, ತಾಯಿ ಚಾಮುಂಡೇಶ್ವರಿ ಆಶೀರ್ವಾದ ನನ್ನ ಮೇಲೆ ಸದಾ ಇರುತ್ತೆ. ಆ ದೇವರ ಆಶೀರ್ವಾದ ಇಲ್ಲ ಅನ್ನುವುದೇ ಇಲ್ಲ. ಆಶೀರ್ವಾದ ಇರುವುದರಿಂದಲೇ ಇಷ್ಟು ವರ್ಷದಿಂದ ರಾಜಕೀಯದಲ್ಲಿ ಉಳಿದಿರುವುದು ಅಂತ ತಿಳಿಸಿದ್ದಾರೆ.
ಇನ್ನೂ ಸಮಾಜದಲ್ಲಿ ಹೊಗಳುವವರೂ ಇರುತ್ತಾರೆ, ತೆಗಳುವವರೂ ಇರುತ್ತಾರೆ. ಆದ್ರೆ ಇಬ್ಬರ ನಡುವೆ ಆರೋಗ್ಯಕರ ಚರ್ಚೆ ಆಗಬೇಕು ಎಂದು ಸಲಹೆ ನೀಡಿದ್ದಾರೆ. ಇದೇ ವೇಳೆ ಪತ್ರಿಕೆಗಳಲ್ಲಿ ಸರ್ಕಾರದಿಂದ ಜಾಹೀರಾತು ಕೊಟ್ಟಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ್ದು, ದಸರಾ ಅಂದ್ರೆ ದುಷ್ಟ ಶಕ್ತಿಗಳ ಸಂಹಾರ. ಶಿಷ್ಟ ಜನರ ರಕ್ಷಣೆ ಅದೇ ದಸರಾ. ವಿಜಯನಗರದ ಅರಸರು ಜಯದ ಸಂಕೇತವಾಗಿ ಆಚರಣೆ ಮಾಡಿದ್ರು.
ಮೈಸೂರು ಅರಸರು ಅದನ್ನ ಮುಂದುವರಿಸಿಕೊಂಡು ಬಂದರು. ಇವತ್ತು ಅದೇ ಸಂಪ್ರದಾಯ ಮುಂದುವರಿದಿದೆ. ಜಾಹಿರಾತನ್ನು ಇವತ್ತಿಗೆ ನೀವು ಹೇಗೆ ವ್ಯಾಖ್ಯಾನ ಮಾಡ್ತಿರಾ ಹಾಗೆ. ನೀವುಗಳು ಕೂಡ ಪರ, ವಿರೋಧವಾಗಿ ವ್ಯಾಖ್ಯಾನ ಮಾಡ್ತೀರಿ ಎಂದು ಕುಟುಕಿದ್ದಾರೆ.