
mysuru-dasara
Ashwaveega News 24×7 ಅ. 08: ಮೈಸೂರಿನಲ್ಲಿ ಗಜಪಡೆ ಕಲರವ ಜೋರಾಗಿದೆ. ನಾಡಹಬ್ಬ ದಸರಾ ಮಹೋತ್ಸವಕ್ಕೆ ಮೈಸೂರಿಗೆ ಬಂದ ಕ್ಯಾಪ್ಟನ್ ಅಭಿಮನ್ಯು ಆ್ಯಂಡ್ ತಂಡ ರಿಲ್ಯಾಕ್ಸ್ ಮೂಡ್ನಲ್ಲಿವೆ. ಇನ್ನು ಈ ಬಾರಿ ನಾಡಹಬ್ಬ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುವ 14 ಆನೆಗಳು, ಮಾವುತರು ಹಾಗೂ ಕಾವಾಡಿಗಳು ಸೇರಿದಂತೆ ಸಿಬ್ಬಂದಿಗೆ ಅರಣ್ಯ ಇಲಾಖೆಯ ವತಿಯಿಂದ 2.04 ಕೋಟಿ ರೂ. ವಿಮೆ ಸೌಲಭ್ಯ ಒದಗಿಸಲಾಗಿದೆ.
14 ಆನೆ, 14 ಮಾವುತರು ಹಾಗೂ 14 ಕಾವಾಡಿಗರು, ಅರಣ್ಯ ಇಲಾಖೆಯ ಸಿಬ್ಬಂದಿ ಸೇರಿದಂತೆ ಒಟ್ಟು 43 ಜನರಿಗೆ ವಿಮೆ ಮಾಡಿಸಲಾಗಿದೆ. ಈ ಪೈಕಿ ಸಾರ್ವಜನಿಕರ ಆಸ್ತಿಪಾಸ್ತಿಗೆ ಹಾನಿ ಹಾಗೂ ಸಾರ್ವಜನಿಕರಿಗೆ ತೊಂದರೆಯಾದರೆ ನಷ್ಟ ಭರಿಸಲು 50 ಲಕ್ಷ ರೂ. ವಿಮೆ ಮಾಡಿಸಲಾಗಿದೆ.
ಗಜಪಯಣದಿಂದ ಜಂಬೂ ಸವಾರಿ ಮುಗಿಸಿ ಆನೆಗಳು ವಾಪಸ್ ಕಾಡಿಗೆ ಮರಳುವವರೆಗೂ ವಿಮೆ ಸೌಲಭ್ಯ ಜಾರಿಯಲ್ಲಿರುತ್ತದೆ. ಇದಕ್ಕಾಗಿ ಜಿಲ್ಲಾಡಳಿತವು ದಿ ನ್ಯೂ ಇಂಡಿಯಾ ಅಶ್ಯೂರೆನ್ಸ್ ಕಂಪನಿಗೆ 67 ಸಾವಿರ ರೂಪಾಯಿ ಪ್ರೀಮಿಯಂ ಪಾವತಿಸಿದೆ.
ಈ ಕುರಿತು ಡಿಸಿಎಫ್ ಡಾ. ಐ.ಬಿ.ಪ್ರಭುಗೌಡ ಈಟಿವಿ ಭಾರತಕ್ಕೆ ಪ್ರತಿಕ್ರಿಯಿಸಿ, “ಅಂಬಾರಿ ಹೊರುವ ಅಭಿಮನ್ಯು ಸೇರಿದಂತೆ ಎಲ್ಲಾ ಗಂಡಾನೆಗಳಿಗೆ ತಲಾ 5 ಲಕ್ಷ ರೂ ಸೇರಿದಂತೆ ಒಟ್ಟು 50 ಲಕ್ಷ ರೂ. ವಿಮೆ ಮಾಡಿಸಲಾಗಿದೆ. ಹೆಣ್ಣಾನೆಗಳಾದ ದುಬಾರೆಯ ಹೇಮಾವತಿ, ಭೀಮನ ಕಟ್ಟೆಯ ರೂಪ, ದುಬಾರೆ ಶಿಬಿರದ ಕಾವೇರಿ ಹಾಗೂ ಬಳ್ಳೆಯ ಲಕ್ಷ್ಮೀ ಆನೆಗಳಿಗೆ ಒಟ್ಟು 18 ಲಕ್ಷ ರೂ. ವಿಮೆ ಮಾಡಿಸಲಾಗಿದೆ.
ಗಜಪಯಣದಿಂದ ಆರಂಭಿಸಿ, ಜಂಬೂ ಸವಾರಿ ಮುಗಿಸಿ ವಾಪಸ್ ಹೋಗುವರೆಗಿನ ಅವಧಿ ಒಳಗೆ ಏನಾದರೂ ಅವಘಡಗಳು ಸಂಭವಿಸಿದರೆ ವಿಮೆ ವ್ಯಾಪ್ತಿಗೆ ಬರುತ್ತದೆ” ಎಂದು ತಿಳಿಸಿದರು.
ಸಿಬ್ಬಂದಿ, ಕಾವಾಡಿ ಮತ್ತು ಮಾವುತರು, ವಿಶೇಷ ಮಾವುತರು, ಸಹಾಯಕರು, ಅಧಿಕಾರಿಗಳು ಸೇರಿದಂತೆ ಒಟ್ಟು 43 ಜನರಿಗೆ 86 ಲಕ್ಷ ರೂ. ವಿಮೆ ಮಾಡಿಸಲಾಗಿದೆ. ದಸರಾ ಆನೆಗಳಿಂದ ಸಾರ್ವಜನಿಕರಿಗೆ ತೊಂದರೆಯಾದಲ್ಲಿ ಅಥವಾ ಸಾರ್ವಜನಿಕರ ಆಸ್ತಿಪಾಸ್ತಿಗಳಿಗೆ ನಷ್ಟವಾದರೂ ವಿಮೆ ದೊರೆಯಲಿದೆ. ಇದಕ್ಕೆ 50 ಲಕ್ಷ ರೂ. ವಿಮೆ ಮಾಡಿಸಲಾಗಿದೆ.