
ISRO set to launch NISAR, a joint satellite with NASA
Ashwaveega News 24×7 ಜು. 30: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಮತ್ತು ಅಮೆರಿಕದ ನಾಸಾ ಜಂಟಿಯಾಗಿ ಅಭಿವೃದ್ಧಿಪಡಿಸಿರುವ ʻನಾಸಾ – ಇಸ್ರೋ ಸಿಂಥೆಟಿಕ್ ಅಪರ್ಚರ್ ರೇಡಾರ್ (ನಿಸಾರ್ NISAR)ʼ ಉಪಗ್ರಹ ಇಂದು ಶ್ರೀಹರಿಕೋಟಾದಿಂದ ಉಡಾವಣೆಗೆ ಸಜ್ಜಾಗಿದೆ. ʻನಿಸಾರ್ʼ ಭಾರತೀಯ ಕಾಲಮಾನದ ಪ್ರಕಾರ ಇಂದು ಸಂಜೆ 5:40ಕ್ಕೆ ಇಸ್ರೋದ GSLV-F16 ಉಪಗ್ರಹದ ಬೆನ್ನೇರಿ ಬಾಹ್ಯಾಕಾಶಕ್ಕೆ ತೆರಳಲಿದೆ.
ಈ ಉಪಗ್ರಹವು ಶ್ರೀಹರಿಕೋಟದಿಂದ ಉಡಾವಣೆ ಆಗುತ್ತಿರುವ 102ನೇ ಉಪಗ್ರಹವಾಗಿದೆ. ಹವಾಮಾನ ಬದಲಾವಣೆ, ನೈಸರ್ಗಿಕ ವಿಕೋಪ ನಿರ್ವಹಣೆ ಮತ್ತು ಕೃಷಿ ಕ್ಷೇತ್ರಗಳಿಗೆ ಅಮೂಲ್ಯವಾದ ಮಾಹಿತಿ ಒದಗಿಸಲಿದೆ.
ಅಲ್ಲದೇ ನಿರ್ಗಲ್ಲು, ಹಿಮಫಲಕಗಳ ಬದಲಾವಣೆ, ಮಣ್ಣಿನಲ್ಲಿರುವ ತೇವಾಂಶ, ಪ್ರವಾಹ, ಅರಣ್ಯ ನಾಶ, ಬೆಳೆಯ ಆರೋಗ್ಯ, ನಗರೀಕರಣ ಮತ್ತು ಸೌಕರ್ಯಗಳ ಬದಲಾವಣೆ ಮುಂತಾದ ವಿಷಯಗಳನ್ನು ಒದಗಿಸಲಿದೆ. ಇದು ಭಾರತ-ಅಮೆರಿಕ ಸಹಭಾಗಿತ್ವದಲ್ಲಿ ಒಂದು ಮಹತ್ವದ ಹೆಜ್ಜೆಯಾಗಿದೆ.
ಇದರೊಡನೆ ಭಾರತ – ಅಮೆರಿಕದ ಮುಂದಿನ ಬಹು ವರ್ಷಗಳ ಬಾಹ್ಯಾಕಾಶ ಸಹಕಾರ ಆರಂಭಗೊಳ್ಳಲಿದೆ. ಕಕ್ಷೆಯತ್ತ ರಾಕೆಟ್ನ ಪ್ರಯಾಣ ಬಹುತೇಕ 19 ನಿಮಿಷ ತೆಗೆದುಕೊಳ್ಳಲಿದೆ.
ಆ ಬಳಿಕ, ನಿಸಾರ್ ಉಪಗ್ರಹವನ್ನು ಅದರ ಉದ್ದೇಶಿತ-747 ಸನ್ ಸಿಂಕ್ರೊನಸ್ ಕಕ್ಷೆಯಲ್ಲಿ ಅಳವಡಿಸಲಾಗುತ್ತದೆ. ಈ ಯೋಜನೆಯನ್ನು ವಿಶೇಷವಾಗಿಸುವುದು ಕೇವಲ ಅದರ ಮಹತ್ವಾಕಾಂಕ್ಷೆ ಮತ್ತು ಸಾಮರ್ಥ್ಯಗಳು ಮಾತ್ರವಲ್ಲ. ಬದಲಿಗೆ, ನಿಸಾರ್ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ತೋರಿದ ತಾಳ್ಮೆ ಮತ್ತು ನಿಖರತೆಗಳೂ ಅಷ್ಟೇ ಮುಖ್ಯವಾಗಿವೆ.
ಇನ್ನೂ ನಿಸಾರ್ ಭೂಸರ್ವೇಕ್ಷಣಾ ಉಪಗ್ರಹಕ್ಕೆ 13,000 ಕೋಟಿ ರೂ. ವೆಚ್ಚ ಮಾಡಲಾಗಿದ್ದು, ವಿಶ್ವದ ಅತ್ಯಂತ ದುಬಾರಿ ಕಣ್ಗಾವಲು ಉಪಗ್ರಹವಾಗಿ ಗುರುತಿಸಿಕೊಂಡಿದೆ. ಅಲ್ಲದೇ ನಿಸಾರ್ ಉಪಗ್ರಹವು ಒಂದು ಬಾರಿಗೆ 242 ಕಿಮೀ ಭೂವಿಸ್ತೀರ್ಣವನ್ನು ನೋಡುವ ಸಾಮರ್ಥ್ಯ ಹೊಂದಿದೆ.
97 ನಿಮಿಷಕ್ಕೆ ಭೂಮಿಗೆ ಒಂದು ಸುತ್ತು ಬರಲಿದ್ದು, 12 ದಿನಗಳಿಗೆ ಒಮ್ಮೆ ಇಡೀ ಭೂಮಿ ಸುತ್ತಲಿದೆ. ಮುಖ್ಯವಾಗಿ ನಿಸಾರ್ ಉಪಗ್ರಹವು ಕಳುಹಿಸುವ ಎಲ್ಲ ಮಾಹಿತಿಗಳು ಹಾಗೂ ದತ್ತಾಂಶಗಳನ್ನು ಉಚಿತವಾಗಿ ಎಲ್ಲಾ ದೇಶಗಳು ಅಧ್ಯಯನಕ್ಕೆ ಬಳಕೆ ಮಾಡಿಕೊಳ್ಳಬಹುದಾಗಿದೆ.