Ashwaveega News 24×7 ಫೆಬ್ರವರಿ 03 -2026 : ಕರ್ನಾಟಕ ವಿಧಾನ ಪರಿಷತ್ನಲ್ಲಿ ಭಾರೀ ರಾಜಕೀಯ ಗದ್ದಲಕ್ಕೆ ಕಾರಣವಾದ ಹೇಳಿಕೆ ಹೊರಬಿದ್ದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಆಪ್ತರೆಂದು ಗುರುತಿಸಲ್ಪಡುವ ಕಾಂಗ್ರೆಸ್ MLC ನಸೀರ್ ಅಹ್ಮದ್, ಟೀಕೆ ಭರದಲ್ಲಿ ಪ್ರಧಾನಿ ನರೇಂದ್ರ ಮೋದಿಗೆ “ದೇಶದ್ರೋಹಿ” ಎಂಬ ಪದ ಬಳಸಿ ವಿವಾದ ಎಬ್ಬಿಸಿದ್ದಾರೆ.
“ಮೋದಿ ದೇಶಕ್ಕೆ ದ್ರೋಹ ಮಾಡಿದ್ದಾರೆ” ಎಂಬ ನಸೀರ್ ಅಹ್ಮದ್ ಹೇಳಿಕೆ, ಸದನದೊಳಗೆ ಭಾರೀ ಆಕ್ರೋಶಕ್ಕೆ ಕಾರಣವಾಯಿತು. ಈ ಹೇಳಿಕೆಯನ್ನು ಬಿಜೆಪಿ ತೀವ್ರವಾಗಿ ಖಂಡಿಸಿದ್ದು, ಕೇಸರಿ ಪಡೆ ಕೆರಳಿ ಕೆಂಡವಾಗಿದೆ.
ನಸೀರ್ ಅಹ್ಮದ್ ಹೇಳಿಕೆಗಳು ಸದನದಲ್ಲಿ ದಾಖಲಾಗುತ್ತಿದ್ದಂತೆಯೇ ಬಿಜೆಪಿ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿದರು. ಈ ಹೇಳಿಕೆ ವಿಪಕ್ಷಗಳ ಕೈಗೆ ಅಸ್ತ್ರಕೊಟ್ಟಂತಾಗಿದೆ ಎಂದು ಬಿಜೆಪಿ ಆರೋಪಿಸಿದೆ.
ಗದ್ದಲದ ನಡುವೆಯೇ ನಸೀರ್ ಅಹ್ಮದ್ ಹೇಳಿಕೆಯನ್ನು ಸದನದ ಕಡತಗಳಿಂದ ತೆಗೆದುಹಾಕಲಾಗಿದೆ. ಆದರೂ ಇದರಿಂದ ತೃಪ್ತಿಯಾಗದ ಬಿಜೆಪಿ, MLC ನಸೀರ್ ಅಹ್ಮದ್ ಅವರನ್ನು ಸದನದಿಂದ ಅಮಾನತು ಮಾಡಬೇಕು ಎಂದು ಪಟ್ಟು ಹಿಡಿದಿದೆ.
“ದೇಶದ ಪ್ರಧಾನಿಗೆ ‘ದೇಶದ್ರೋಹಿ’ ಪದ ಬಳಸುವುದು ಅಕ್ಷಮ್ಯ. ಇದು ಸಂವಿಧಾನ ವಿರೋಧಿ, ರಾಷ್ಟ್ರ ವಿರೋಧಿ” ಎಂದು ಬಿಜೆಪಿ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. ಸದನದಲ್ಲಿ ಘೋಷಣೆ, ಪ್ರತಿಭಟನೆ ಜೋರಾಗಿದ್ದು, ಕಾರ್ಯ ಕಲಾಪ ಕೆಲಕಾಲ ಅಸ್ತವ್ಯಸ್ತವಾಯಿತು.
ಒಟ್ಟಿನಲ್ಲಿ, ನಸೀರ್ ಅಹ್ಮದ್ ಹೇಳಿಕೆ ವಿಧಾನ ಪರಿಷತ್ನಲ್ಲಿ ರಾಜಕೀಯ ಕಿಚ್ಚು ಹೊತ್ತಿಸಿದ್ದು, ಅಮಾನತು ಆಗ್ರಹದೊಂದಿಗೆ ಬಿಜೆಪಿ ಹೋರಾಟ ಮುಂದುವರಿಸಿದೆ. ಈ ವಿಚಾರ ಮುಂದಿನ ದಿನಗಳಲ್ಲಿ ರಾಜ್ಯ ರಾಜಕಾರಣದಲ್ಲಿ ಮತ್ತಷ್ಟು ತಿರುವು ಪಡೆದುಕೊಳ್ಳುವ ಸಾಧ್ಯತೆ ಇದೆ.
