
Ashwaveega News 24×7 ಸೆ. 09: ಸುಟ್ಟ ಗಾಯಗಳಿಂದ ಬಳಲುತ್ತಿದ್ದ ಮಾಜಿ ಪ್ರಧಾನಿ ಜಲನಾಥ್ ಖನಾಲ್ ಅವರ ಪತ್ನಿ ರಾಜ್ಯಲಕ್ಷ್ಮಿ ಚಿತ್ರಾಕರ್ ಆಸ್ಪತ್ರೆಯಲ್ಲೇ ಸಾವನ್ನಪ್ಪಿದ್ದಾರೆ.
ಜನರಲ್-ಝಡ್ ನೇತೃತ್ವದಲ್ಲಿ ನಡೆಯುತ್ತಿರುವ ಪ್ರತಿಭಟನೆ ಹಿಂಸಾತ್ಮಕ ರೂಪಕ್ಕೆ ತಿರುಗಿದೆ. ಪ್ರತಿಭಟನಾಕಾರರು ರಾಜಕೀಯ ನಾಯಕರನ್ನೇ ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿದ್ದಾರೆ.
2ನೇ ದಿನವೂ ಪ್ರತಿಭಟನೆ ಮುಂದುವರಿದಿದ್ದು, ಸಂಸತ್ ಭವನ, ಸುಪ್ರೀಂ ಕೋರ್ಟ್, ಅಧಿಕೃತ ಸರ್ಕಾರಿ ಕಟ್ಟಡಗಳು ಮಾತ್ರವಲ್ಲದೇ ಪ್ರಮುಖ ನಾಯಕರ ಮನೆಗಳಿಗೆ ಬೆಂಕಿ ಹಚ್ಚಿ, ವಿಧ್ವಂಸಕ ಕೃತ್ಯಗಳನ್ನ ಎಸಗಿದ್ದಾರೆ.
ಇದರಿಂದಾಗಿ ನೇಪಾಳದ ಮಾಜಿ ಪ್ರಧಾನಿ ಪುಷ್ಪ ಕಮಲ್ ದಹಲ್ ಅಲಿಯಾಸ್ ಪ್ರಚಂಡ, ಶೇರ್ ಬಹದ್ದೂರ್ ದೇವುಬಾ ಮತ್ತು ಜಲನಾಥ್ ಖಾನಲ್ ಅವರ ನಿವಾಸಗಳನ್ನು ಹಾನಿಗೊಳಿಸಿದ್ದಾರೆ. ಜಲನಾಥ್ ಮನೆಗೆ ಬೆಂಕಿ ಹಚ್ಚಿದ ವೇಳೆ ಗಂಭೀರವಾಗಿ ಗಾಯಗೊಂಡಿದ್ದ ನೇಪಾಳದ ಮಾಜಿ ಪ್ರಥಮ ಮಹಿಳೆ ರಾಜ್ಯಲಕ್ಷ್ಮಿ ಚಿತ್ರಾಕರ್ ಸಾವನ್ನಪ್ಪಿದ್ದಾರೆ.
ಬೆಂಕಿ ಹಚ್ಚಿದಾಗ ರಾಜ್ಯಲಕ್ಷ್ಮಿ ಮನೆಯ ಒಳಗೆಯೇ ಇದ್ದರು. ಗಾಯಗೊಂಡಿದ್ದ ಅವರನ್ನ ಬಳಿಕ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಸುಟ್ಟ ಗಾಯಗಳಿಂದ ತೀವ್ರವಾಗಿ ಬಳಲುತ್ತಿದ್ದ ಚಿತ್ರಾಕರ್ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲೇ ಸಾವನ್ನಪ್ಪಿದ್ದಾರೆ.