
Ex-Hassan MP Prajwal Revanna Convicted In Rape Case
Ashwaveega News 24×7 ಆ. 01: ಪ್ರಜ್ವಲ್ ರೇವಣ್ಣಗೆ ಬಿಗ್ ಶಾಕ್ ಅಂದ್ರೆ ತಪ್ಪಾಗಲ್ಲ. ಮನೆ ಕೆಲಸದಾಕೆ ಮೇಲೆ ಅತ್ಯಾಚಾರ ಕೇಸ್ನಲ್ಲಿ ದೋಷಿ ಅಂತ ಇಂದು ಕೋರ್ಟ್ ತೀರ್ಪು ನೀಡಿದೆ. ಇದು ಪ್ರಜ್ವಲ್ ರೇವಣ್ಣಗೆ ಬಿಗ್ ಶಾಕ್ ನೀಡಿದೆ. ಪ್ರಜ್ವಲ್ ಪ್ರಕರಣಕ್ಕೆ ಸಂಬಂಧಿಸಿದಂತೆ 26 ಸಾಕ್ಷಿಗಳ ವಿಚಾರಣೆ ನಡೆಸಿರುವ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಇಂದು ತೀರ್ಪು ಪ್ರಕಟಿಸಿದ್ದು, ಅತ್ಯಾಚಾರ ಕೇಸ್ನಲ್ಲಿ ಪ್ರಜ್ವಲ್ ರೇವಣ್ಣ ದೋಷಿ ಎಂದು ನ್ಯಾಯಮೂರ್ತಿ ಸಂತೋಷ್ ಗಜಾನನ ಭಟ್ ಆದೇಶ ಹೊರಡಿಸಿದ್ದಾರೆ.
ಇನ್ನೂ ಈ ತೀರ್ಪು ಬರ್ತಿದ್ದಂತೆ ಪ್ರಜ್ವಲ್ ರೇವಣ್ಣ ಕೋರ್ಟ್ನಲ್ಲೇ ಬಿಕ್ಕಿ ಬಿಕ್ಕಿ ಕಣ್ಣೀರಿಟ್ಟಿದ್ದಾರೆ.
ತೀರ್ಪು ಪ್ರಕಟಿಸುವ ವೇಳೆ ಪ್ರಜ್ವಲ್ ರೇವಣ್ಣ ಕೂಡ ಕೋರ್ಟ್ ಹಾಲ್ನಲ್ಲಿ ಹಾಜರಿದ್ದರು. ಶಿಕ್ಷೆಯ ಪ್ರಮಾಣ ಶನಿವಾರ ಪ್ರಕಟವಾಗಲಿದೆ. ಕೋರ್ಟ್ ದೋಷಿ ಎಂದು ತೀರ್ಪು ನೀಡುವ ವೇಳೆ ಪ್ರಜ್ವಲ್ ರೇವಣ್ಣ ಕಣ್ಣಿರಿಟ್ಟಿದ್ದಾರೆ. ಅತ್ಯಾಚಾರ ಪ್ರಕರಣದಲ್ಲಿ ಆರೋಪ ಸಾಬೀತಾದರೆ ಕನಿಷ್ಠ 10 ವರ್ಷ, ಗರಿಷ್ಟ ಜೀವಾವಧಿ ಶಿಕ್ಷೆ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ.
ಈ ಪ್ರಕರಣದ ಕೊನೆಯ ವಿಚಾರಣೆ ಜುಲೈ 30 ರಂದು ನಡೆದಿತ್ತು . ಸರ್ಕಾರಿ ಪರ ವಕೀಲ ಎನ್ ಜಗದೀಶ್ ಹಾಗೂ ಅಶೋಕ್ ನಾಯಕ್ ಹಾಗೂ ಪ್ರಜ್ವಲ್ ರೇವಣ್ಣ ಪರ ವಕೀಲ ಅರುಣ್ ಜಿ ಅವರು ಹಾಜರಾಗಿದ್ದರು.
ತೀರ್ಪು ಕಾಯ್ದಿರಿಸಿದ್ದ ಕೋರ್ಟ್ ಮೊಬೈಲ್ ಸಾಕ್ಷ್ಯ, ತಾಂತ್ರಿಕ ಸಾಕ್ಷ್ಯಗಳ ಬಗ್ಗೆ ಸ್ಪಷ್ಟನೆ ಕೇಳಿತ್ತು. ಇದರೊಂದಿಗೆ ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಬಗ್ಗೆ ನ್ಯಾಯಾಧೀಶರು ಕೆಲ ಮಾಹಿತಿ ಕೇಳಿ ಇಂದಿಗೆ ಮುಂದೂಡಿತ್ತು.
ಕಳೆದ 14 ತಿಂಗಳಿನಿಂದ ಸೆರೆವಾಸದಲ್ಲಿರುವ ಪ್ರಜ್ವಲ್ ರೇವಣ್ಣ ಅವರ ರಾಜಕೀಯ ಭವಿಷ್ಯದ ದೃಷ್ಟಿಯಿಂದಲೂ ಈ ತೀರ್ಪು ಮಹತ್ವ ಪಡೆದಿದೆ. ಈ ಪ್ರಕರಣ ಅಲ್ಲದೇ ಇನ್ನೂ 2 ಪ್ರಕರಣದಲ್ಲಿ ತೀರ್ಪು ಬರಬೇಕಿದೆ.