
pratham files case against darshan fans
Ashwaveega News 24×7 ಜು. 29: ನಟ ದರ್ಶನ್ ಅಭಿಮಾನಿಗಳು ಆಶ್ಲೀಲವಾಗಿ ಸಂದೇಶ ಕಳುಹಿಸಿದ ಆರೋಪದಡಿ ನಿನ್ನೆಯಷ್ಟೇ ನಟಿ ರಮ್ಯಾ ಪೊಲೀಸ್ ಠಾಣೆ ಮೆಟ್ಟಿಲೇರಿದ್ದ ಬೆನ್ನಲ್ಲೇ ಕನ್ನಡದ ನಟ ಒಳ್ಳೆ ಹುಡುಗ ಪ್ರಥಮ್ ಕೂಡ ಇಂದು ದೂರು ನೀಡಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಎಸ್ಪಿ ಸಿ.ಕೆ. ಬಾಬಾ ಅವರನ್ನು ಭೇಟಿಯಾಗಿ ಪ್ರಥಮ್ ದೂರು ನೀಡಿದರು. ‘ನಟ ದರ್ಶನ್ ಅವರೊಂದಿಗೆ ಜೈಲಿನ ಒಂದೇ ಬ್ಯಾರಕ್ನಲ್ಲಿದ್ದ ವ್ಯಕ್ತಿಯೋರ್ವ ನನ್ನನ್ನು ಉದ್ದೇಶಿಸಿ ಬಾಸ್ (ದರ್ಶನ್) ವಿರುದ್ಧ ಅವಹೇಳನಕಾರಿಯಾಗಿ ಮಾತನಾಡುತ್ತೀಯಾ ಎಂದು ಹೇಳಿ ಡ್ರ್ಯಾಗರ್ ಹಾಗೂ ಚಾಕು ತೋರಿಸಿ ಚುಚ್ಚಲು ಯತ್ನಿಸಿದ್ದಾರೆ’ ಎಂದು ಪ್ರಥಮ್ ದೂರಿನಲ್ಲಿ ಆರೋಪಿಸಿದ್ದಾರೆ.
ಈ ಬೆಳವಣಿಗೆ ನಡುವೆ ದರ್ಶನ್ ಅವರ ಅಧಿಕೃತ ಫ್ಯಾನ್ ಪೇಜ್ ಡಿ ಡೈನಾಸ್ಟಿ, ಡಿ ಕಿಂಗ್ ಡಮ್, ಡಿ ಯೂನಿವರ್ಸ್ ಮತ್ತು ಡೆವಿಲ್ ಕಿಂಗ್ ಡಮ್ ಸೇರಿದಂತೆ 500ಕ್ಕೂ ಹೆಚ್ಚು ಇನ್ ಸ್ಟ್ರಾಗ್ರಾಮ್ ಪೇಜ್ಗಳಿಂದ ನನ್ನ ವೈಯಕ್ತಿಕ ತೇಜೋವಧೆಗೆ ಇಳಿದಿದ್ದಾರೆ. ಇಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ನನಗೆ ಜೀವಭಯವಿದ್ದು ರಕ್ಷಣೆಯ ಅಗತ್ಯವಿದೆ. ಘಟನೆ ಸಂಬಂಧ ಒಂದು ವಾರದಿಂದ ನನಗೆ ತೊಂದರೆ ಮಾಡಿದ್ದವರ ಬಗ್ಗೆ ಬುದ್ಧಿ ಹೇಳಿಸಿ ರಾಜಿಯಾಗಲು ದರ್ಶನ್ ಆಪ್ತರು ಪ್ರಯತ್ನಿಸಿದ್ದಾರೆ ಎಂದು ದೂರಿನಲ್ಲಿ ಪ್ರಥಮ್ ತಿಳಿಸಿದ್ದಾರೆ.
ದೂರು ನೀಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರಥಮ್, ”ಸಿನಿಮಾವೊಂದರ ಆಹ್ವಾನದ ಮೇರೆಗೆ ದೊಡ್ಡಬಳ್ಳಾಪುರದ ಯಲ್ಲಮ್ಮ ದೇವಸ್ಥಾನದಲ್ಲಿ ಪೂಜಾ ಕಾರ್ಯಕ್ರಮಕ್ಕೆ ಹೋಗಿದ್ದೆ. ಪೂಜೆ ಮುಗಿಸಿ ಹೊರಡುವಾಗ ಯಶಸ್ವಿನಿ ಹಾಗೂ ಬೇಕರಿ ರಘು ಸೇರಿದಂತೆ ಕೆಲ ಅಪರಿಚಿತರು ನನ್ನನ್ನು ಸುತ್ತುವರೆದು ಅಜ್ಞಾತ ಸ್ಥಳಕ್ಕೆ ಕರೆದೊಯ್ದರು. ನನ್ನ ಬಾಸ್ (ದರ್ಶನ್) ಬಗ್ಗೆ ಮಾತನಾಡಿದ್ದೀಯಾ ಎಂದು ಅವಾಚ್ಯ ಶಬ್ದಗಳಿಂದ ಬೈಯ್ದು ಅವರ ಬಳಿಯಿದ್ದ ಡ್ರ್ಯಾಗರ್ ತೋರಿಸಿ ಚಾಕು ತೋರಿಸಿ ಚುಚ್ಚುವುದಾಗಿ ಭಯಬೀಳಿಸಿದ್ಧಾರೆ. ಉಪಾಯದಿಂದ ಪ್ರಾಣ ಉಳಿಸಿಕೊಂಡು ಅಲ್ಲಿಂದ ಬಂದಿದ್ದೇನೆ” ಎಂದು ದೂರಿನಲ್ಲಿ ವಿವರಿಸಿದ್ದಾರೆ.
ದರ್ಶನ್ ಅವರ ಜಾಮೀನು ವಿಚಾರ ಸುಪ್ರೀಂಕೋರ್ಟ್ನಲ್ಲಿ ಇರುವುದರಿಂದ ಅವರಿಗೆ ತೊಂದರೆಯಾಗಬಹುದು ಎಂದು ಸುಮ್ಮನಿದ್ದೆ. ಇದನ್ನು ಅವರ ಅಂಧಾಭಿಮಾನಿಗಳು ಅರ್ಥ ಮಾಡಿಕೊಂಡಿಲ್ಲ. ಬೆದರಿಕೆ ಸಂಬಂಧ ದರ್ಶನ್ ಅವರ ಅಭಿಮಾನಿಗಳಿಗೆ ಬುದ್ಧಿ ಹೇಳಲಿ. ಎಸ್ಪಿ ಕಚೇರಿಗೆ ಬಂದು ಹೇಳಿಕೆ ನೀಡಲಿ ಎಂದಿದ್ದಾರೆ.