
Sanjog Gupta Named ICC Chief Executive
(ಅಶ್ವವೇಗ) Ashwaveega News 24×7 ಜು.07: ಭಾರತೀಯ ಮಾಧ್ಯಮದ ಅನುಭವಿ ಸಂಜೋಗ್ ಗುಪ್ತಾ ಅವರನ್ನು ಜಯ್ ಶಾ ನೇತೃತ್ವದ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯ (ಐಸಿಸಿ) ಹೊಸ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಆಗಿ ನೇಮಿಸಲಾಗಿದೆ.
ಆಸ್ಟ್ರೇಲಿಯಾದ ಜೆಫ್ ಅಲಾರ್ಡೈಸ್ ಅವರ ಜಾಗಕ್ಕೆ ಗುಪ್ತಾ ನೇಮಕವಾಗಿದ್ದಾರೆ. ವೈಯಕ್ತಿಕ ಕಾರಣಗಳನ್ನು ಉಲ್ಲೇಖಿಸಿ ಚಾಂಪಿಯನ್ಸ್ ಟ್ರೋಫಿಗೆ ಮುಂಚಿತವಾಗಿ ಜೆಫ್ ಅಲಾರ್ಡೈಸ್ ಈ ವರ್ಷದ ಆರಂಭದಲ್ಲಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದರು. ಇದಕ್ಕೂ ಮೊದಲು ಅವರು 4 ವರ್ಷಗಳ ಕಾಲ ಈ ಹುದ್ದೆಯನ್ನು ಅಲಂಕರಿಸಿದ್ದರು.
ಸಂಜೋಗ್ ಗುಪ್ತಾ ಪ್ರಸ್ತುತ ಜಿಯೋಸ್ಟಾರ್ನಲ್ಲಿ ಸಿಇಒ (ಕ್ರೀಡೆ ಮತ್ತು ನೇರ ಅನುಭವ) ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರಿಗೆ ಎರಡು ದಶಕಗಳಿಗೂ ಹೆಚ್ಚು ಕಾಲ ವಿವಿಧ ಕಾರ್ಯಗಳ ಅನುಭವವಿದೆ. ಸಂಜೋಯ್ ಗುಪ್ತಾ ತಕ್ಷಣದಿಂದ ಜಾರಿಗೆ ಬರುವಂತೆ ತಮ್ಮ ಹೊಸ ಪಾತ್ರವನ್ನು ವಹಿಸಿಕೊಳ್ಳಲಿದ್ದಾರೆ.
ಸಂಜೋಗ್ ಗುಪ್ತಾ ಪತ್ರಕರ್ತರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಅವರು 2010ರಲ್ಲಿ ಸ್ಟಾರ್ ಇಂಡಿಯಾ (ಈಗ ಜಿಯೋಸ್ಟಾರ್) ಸೇರಿದರು. 2020ರಲ್ಲಿ ಡಿಸ್ನಿ ಮತ್ತು ಸ್ಟಾರ್ ಇಂಡಿಯಾದಲ್ಲಿ ಕ್ರೀಡಾ ಮುಖ್ಯಸ್ಥರಾಗಿ ನೇಮಕಗೊಂಡರು.
ನವೆಂಬರ್ 2024ರಲ್ಲಿ ವಯಾಕಾಮ್ 18 ಮತ್ತು ಡಿಸ್ನಿ ಸ್ಟಾರ್ ವಿಲೀನದ ನಂತರ ಸಂಜೋಗ್ ಗುಪ್ತಾ ಅವರನ್ನು ಜಿಯೋಸ್ಟಾರ್ ಸ್ಪೋರ್ಟ್ಸ್ನ ಸಿಇಒ ಆಗಿ ನೇಮಿಸಲಾಯಿತು. ಐಸಿಸಿಯ ಸಿಇಒ ಹುದ್ದೆಯನ್ನು ಈ ಹಿಂದೆ ಆಸ್ಟ್ರೇಲಿಯನ್ನರಾದ ಡೇವಿಡ್ ರಿಚರ್ಡ್ಸ್, ಮಾಲ್ಕಮ್ ಸ್ಪೀಡ್ ಮತ್ತು ಅಲಾರ್ಡೈಸ್, ದಕ್ಷಿಣ ಆಫ್ರಿಕನ್ನರಾದ ಡೇವಿಡ್ ರಿಚರ್ಡ್ಸನ್ ಮತ್ತು ಆರನ್ ಲೋರ್ಗಟ್ ಮತ್ತು ಭಾರತ ಮೂಲದ ಮನು ಸಾಹ್ನಿ ನಿರ್ವಹಿಸಿದ್ದಾರೆ.