Ashwaveega News 24×7 ಜನವರಿ 23 – ಮಕ್ಕಳ ಸೋಷಿಯಲ್ ಮೀಡಿಯಾ ಬಳಕೆಗೆ ಬ್ರೇಕ್ ಹಾಕುವ ಕುರಿತು ಸರ್ಕಾರಗಳು ಗಂಭೀರ ಚಿಂತನೆ ನಡೆಸುತ್ತಿರುವ ಬೆಳವಣಿಗೆಗಳು ಕಾಣಿಸುತ್ತಿವೆ. 16 ವರ್ಷದೊಳಗಿನ ಮಕ್ಕಳಿಗೆ ಜಾಲತಾಣ ಬಳಕೆಯನ್ನು ನಿಷೇಧಿಸುವ ಬಗ್ಗೆ ಆಂಧ್ರಪ್ರದೇಶ ಸರ್ಕಾರ ಅಧ್ಯಯನ ಆರಂಭಿಸಿದೆ ಎಂದು ಐಟಿ ಸಚಿವ ನಾರಾ ಲೋಕೇಶ್ ತಿಳಿಸಿದ್ದಾರೆ.
ಜಾಲತಾಣ ಬಳಕೆಯಿಂದ ಚಿಕ್ಕ ಮಕ್ಕಳ ಮಾನಸಿಕ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿರುವ ಹಿನ್ನೆಲೆಯಲ್ಲಿ, ಈ ನಿರ್ಬಂಧ ಅಗತ್ಯವಾಗಿದೆ ಎಂದು ಸಚಿವರು ಅಭಿಪ್ರಾಯಪಟ್ಟಿದ್ದಾರೆ. ಆಸ್ಟ್ರೇಲಿಯಾದಲ್ಲಿ 16 ವರ್ಷದೊಳಗಿನ ಮಕ್ಕಳಿಗೆ ಸೋಷಿಯಲ್ ಮೀಡಿಯಾ ಬ್ಯಾನ್ ಮಾಡಿರುವ ಮಾದರಿಯನ್ನು ಅಧ್ಯಯನ ಮಾಡಿ, ಅದೇ ರೀತಿಯ ನಿರ್ಬಂಧಗಳನ್ನು ನಮ್ಮ ದೇಶದಲ್ಲೂ ಜಾರಿಗೆ ತರಬಹುದೇ ಎಂಬುದರ ಬಗ್ಗೆ ಸಮಾಲೋಚನೆ ನಡೆಯುತ್ತಿದೆ ಎಂದು ಅವರು ಹೇಳಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಹರಡುವ ನಕಾರಾತ್ಮಕ ಹಾಗೂ ಹಾನಿಕಾರಕ ವಿಷಯಗಳನ್ನು ಪುಟ್ಟ ಮಕ್ಕಳು ಸರಿಯಾಗಿ ಗ್ರಹಿಸುವಷ್ಟು ಪ್ರಬುದ್ಧರಾಗಿರುವುದಿಲ್ಲ. ಇದರಿಂದ ಅವರ ಮನಸ್ಸಿನ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.
ಇದಲ್ಲದೆ, ಮಕ್ಕಳ ಸುರಕ್ಷತೆಯ ದೃಷ್ಟಿಯಿಂದಲೂ ಜಾಲತಾಣ ಬಳಕೆಗೆ ಬ್ರೇಕ್ ಅಗತ್ಯ ಎಂದು ಸರ್ಕಾರ ಅಭಿಪ್ರಾಯಪಟ್ಟಿದ್ದು, ಈ ಕುರಿತು ಬಲವಾದ ಕಾನೂನು ರೂಪಿಸುವ ಅಗತ್ಯವಿದೆ ಎಂಬ ಮಾತನ್ನೂ ನಾರಾ ಲೋಕೇಶ್ ಸ್ಪಷ್ಟಪಡಿಸಿದ್ದಾರೆ.
ಮಕ್ಕಳ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಹಿತದೃಷ್ಟಿಯಿಂದ ಸೋಷಿಯಲ್ ಮೀಡಿಯಾ ನಿಷೇಧದ ಬಗ್ಗೆ ರಾಷ್ಟ್ರೀಯ ಮಟ್ಟದಲ್ಲಿ ಚರ್ಚೆ ಆರಂಭವಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
