
Ashwaveega News 24×7 ಸೆ. 12: ಹಿಂದುಳಿದ ವರ್ಗಗಳ ಆಯೋಗದ ನೇತೃತ್ವದಲ್ಲಿ ಹೊಸದಾಗಿ ಜಾತಿ ಜನಗಣತಿ ನಡೆಸಲು ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ನಿರ್ಧಾರ ಮಾಡಿದೆ. ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರ ವರೆಗೆ ಮಧುಸೂದನ್ ನಾಯಕ್ ಸಮಿತಿ ನೇತೃತ್ವದಲ್ಲಿ ಸಮೀಕ್ಷೆ ನಡೆಯಲಿದೆ. ಮರು ಸಮೀಕ್ಷೆಗೆ ಸದ್ಯ 420 ಕೋಟಿ ರೂ. ಖರ್ಚಾಗಲಿದ್ದು, ಅಗತ್ಯಬಿದ್ದರೆ ಹೆಚ್ಚಿನ ಅನುದಾನ ನೀಡುವುದಾಗಿ ಸಿಎಂ ಸಿದ್ದರಾಮಯ್ಯ ಘೋಷಿಸಿದರು. ಪ್ರತಿಯೊಬ್ಬರಿಗೂ ಸಮಾನತೆ ಕಲ್ಪಿಸುವ ಉದ್ದೇಶದಿಂದ ಈ ಗಣತಿ ಮುಖ್ಯವಾಗಿದ್ದು, ಎಲ್ಲಾ ನಾಗರಿಕರೂ ಪಾಲ್ಗೊಳ್ಳಬೇಕು, ಸಮೀಕ್ಷೆಯಲ್ಲಿ ಕೇಳುವ 60 ಪ್ರಶ್ನೆಗಳಿಗೆ ಉತ್ತರಿಸಬೇಕು ಎಂದು ಸಿದ್ದರಾಮಯ್ಯ ಕರೆ ನೀಡಿದರು.
ಬೆಂಗಳೂರಿನಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಿಎಂ, ಜಾತಿ ಜನಗಣತಿ ವರದಿ ಬಗ್ಗೆ ಸಂಪೂರ್ಣ ವಿವರಣೆ ನೀಡಿದರು. ಸಮಾಜದಲ್ಲಿ ಅನೇಕ ಜಾತಿ, ಧರ್ಮಗಳಿವೆ. ವೈರುಧ್ಯ, ಅಸಮಾನತೆ ಇದೆ. ಆದ್ರೆ ಸಂವಿಧಾನ ಎಲ್ಲರಿಗೂ ಸಮಾನ ಅವಕಾಶ, ಸಾಮಾಜಿಕ ನ್ಯಾಯ ಕೊಡಬೇಕು ಅಂತ ಹೇಳುತ್ತೆ. ಅಂಬೇಡ್ಕರ್ ಕೂಡ ಇದನ್ನೇ ಹೇಳಿದ್ದಾರೆ.
ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ರಾಜಕೀಯ ಅಸಮಾನತೆ ಇದೆ ಅಂತ ಅಂಬೇಡ್ಕರ್ ಹೇಳಿದ್ರು. ಈ ಪ್ರಜಾಪ್ರಭುತ್ವ ಉಳಿಯಬೇಕಾದ್ರೆ ಅಸಮಾನತೆ ಹೋಗಲಾಡಿಸಬೇಕು. ಅಸಮಾನತೆ ಇದ್ದರೆ ಅದರಿಂದ ನರಳೊ ಜನರು ಪ್ರಜಾಪ್ರಭುತ್ವದ ಸೌಧ ಧ್ವಂಸ ಮಾಡ್ತಾರೆ ಅಂತ ಹೇಳಿದ್ರು. ಹಾಗಾಗಿ ಸಮಾಜದಲ್ಲಿ ಅಸಮಾನತೆ ಉಳಿಯಲು ಅವಕಾಶ ಕೊಡಬಾರದು ಎಂದು ಸಿಎಂ ಕಿವಿಮಾತು ಹೇಳಿದರು.
ಇನ್ನು ನಮ್ಮ ರಾಜ್ಯದಲ್ಲಿ ಸದ್ಯ 7 ಕೋಟಿ ಜನಸಂಖ್ಯೆ ಇದೆ. ಸುಮಾರು 2 ಕೋಟಿ ಕುಟುಂಬಗಳು ಇವೆ. ಇವರಿಗೆ ಸಮಾನ ಅವಕಾಶ ಒದಗಿಸಬೇಕು. ಸಮಾನತೆ ಸಮವಾಗಿ ಕೊಡಬೇಕು. ಅದನ್ನೇ ಸಂವಿಧಾನ ಹೇಳಿರೋದು. ಸಮಾನತೆ, ಸಮಾನ ಅವಕಾಶ ಒದಗಿಸೋದು ನಮ್ಮ ಕರ್ತವ್ಯ ಹೀಗಾಗಿ 2015 ರಲ್ಲೇ ಸಮೀಕ್ಷೆ ಮಾಡಿಸಿದ್ದೆ.
ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಮಾಡಿದ್ವಿ. ಕಾಂತರಾಜು ಸರ್ವೆ ಮಾಡಿದ್ರು, ಶಿಕ್ಷಣ, ಉದ್ಯೋಗ, ಜಾತಿ, ಧರ್ಮ ಅಂತ ಗೊತ್ತಾಗಲು ಸರ್ವೆ ಮಾಡಿಸಿದ್ದೆ. ಅವರ ಮಾಹಿತಿ ಗೊತ್ತಾದರೆ ಅವರಿಗೆ ಯೋಜನೆ ಕೊಡಲು ಅನುಕೂಲ ಆಗುತ್ತದೆ ಅನ್ನೋದು ಇದರ ಹಿಂದಿನ ಉದ್ದೇಶವಾಗಿತ್ತು ಎಂದು ತಿಳಿಸಿದರು.
ಇನ್ನು ಕಾಂತರಾಜು ಅಧ್ಯಕ್ಷತೆಯಲ್ಲಿ ಸರ್ವೆ ಮಾಡಿಸಿದ್ವಿ. ಆದ್ರೆ ವರದಿ 10 ವರ್ಷ ಮೀರಿದೆ, ಹಾಗಾಗಿ ಕಾಂತರಾಜು ವರದಿಯನ್ನ ರಿಜೆಕ್ಟ್ ಮಾಡಿದ್ದೇವೆ. ಈಗ ಹೊಸದಾಗಿ ಸರ್ವೆ ಮಾಡಿಸ್ತಿದ್ದೇವೆ. ಸೆಪ್ಟೆಂಬರ್ 22 ರಿಂದ ಅಕ್ಟೋಬರ್ 7 ವರೆಗೆ ಸಮೀಕ್ಷೆ ನಡೆಯಲಿದೆ. 7 ಕೋಟಿ ಜನರ ಸಾಮಾಜಿಕ, ಶೈಕ್ಷಣಿಕ ಮಾಹಿತಿ ಪಡೆಯಲು ಹಿಂದುಳಿದ ವರ್ಗಗಳ ಆಯೋಗದಿಂದ ಸಮೀಕ್ಷೆ ಮಾಡಿಸ್ತಾ ಇದ್ದೇವೆ. ಮಧುಸೂದನ್ ನಾಯಕ್ ನೇತೃತ್ವದ ಆಯೋಗದಿಂದ ಸಮೀಕ್ಷೆ ನಡೆಯಲಿದೆ. ಜಾಗ್ರತೆಯಿಂದ ಸರ್ವೆ ಮಾಡಿ ವರದಿ ಕೊಡಲು ಸೂಚನೆ ನೀಡಲಾಗಿದೆ. ಡಿಸೆಂಬರ್ ಒಳಗೆ ವರದಿ ಕೊಡುವುದಾಗಿ ಹೇಳಿದ್ದಾರೆ ಎಂದು ಮಾಹಿತಿ ನೀಡಿದರು.
ಇನ್ನು ಈ ಅವಧಿಯಲ್ಲಿ ದಸರಾ ರಜೆ ಇದೆ. ಹಾಗಾಗಿ ಶಿಕ್ಷಕರನ್ನ ಸರ್ವೇ ಕಾರ್ಯಕ್ಕೆ ಬಳಕೆ ಮಾಡಿಕೊಳ್ತೇವೆ. ಟೀಚರ್ ಗಳನ್ನ ಸರ್ವೆಗೆ ಬಳಕೆ ಮಾಡಿಕೊಳ್ತೀವಿ. 1.75 ಲಕ್ಷ ಶಿಕ್ಷಕರಿಂದ ಸಮೀಕ್ಷೆ ನಡೆಯುತ್ತದೆ. ಸಮೀಕ್ಷೆಯಲ್ಲಿ ಭಾಗವಹಿಸಿದ ಎಲ್ಲ ಶಿಕ್ಷಕರಿಗೆ ವಿಶೇಷ ಗೌರವ ಧನ ಕೊಡ್ತೀವಿ. ಪ್ರತಿಯೊಬ್ಬರಿಗೆ 20 ಸಾವಿರ ಗೌರವ ಧನ ಸಿಗಲಿದೆ. ಇದಕ್ಕಾಗಿ 325 ಕೋಟಿ ಖರ್ಚು ಆಗಲಿದೆ. ಜೊತೆಗೆ ಮರು ಸಮೀಕ್ಷಗೆ 420 ಕೋಟಿ ಹಣ ಕೊಡುತ್ತೇವೆ. ಇನ್ನೂ ಅಗ್ಯವಿದ್ದರೆ ಮತ್ತೆ ಹಣ ಕೊಡುತ್ತೇವೆ ಎಂದು ವಿವರಿಸಿದ್ದಾರೆ.