
ತಾನು ಅಧಿಕಾರಕ್ಕೆ ಬಂದಾಗಿನಿಂದ ʼತೆರಿಗೆʼ ಎನ್ನುವುದನ್ನೇ ಒಂದು ಅಸ್ತ್ರವನ್ನಾಗಿಸಿಕೊಂಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಈಗ ಜಗತ್ತಿನ ಮೇಲೆ ಮತ್ತೊಂದು ಬ್ರಹ್ಮಾಸ್ತ್ರದ ಪ್ರಯೋಗ ಮಾಡಿದ್ದಾರೆ. ಅದು ʼರೆಸಿಪ್ರೋಕಲ್ ಟ್ಯಾಕ್ಸ್ʼ ಎಂಬ ಹೊಸ ತೆರಿಗೆಯ ಮೂಲಕ. ರೆಸಿಪ್ರೋಕಲ್ ಟ್ಯಾಕ್ಸ್ ಎಂದರೆ, ಯಾವ್ಯಾವ ದೇಶಗಳು ಅಮೆರಿಕದ ಮೇಲೆ ಎಷ್ಟು ತೆರಿಗೆ ವಿಧಿಸುತ್ತಿವೆಯೋ, ಅಷ್ಟೇ ಪ್ರಮಾಣದ ತೆರಿಗೆಯನ್ನು ಆಯಾ ದೇಶಗಳ ಮೇಲೂ ವಿಧಿಸೋದು. ತಮ್ಮ ಚುನಾವಣಾ ಭಾಷಣಗಳಲ್ಲಿ ಹಲವು ಬಾರಿ ಈ ವಿಚಾರ ಪ್ರಸ್ತಾಪಿಸಿದ್ದ ಟ್ರಂಪ್, ಈಗ ಅಧಿಕೃತವಾಗಿ ರೆಸಿಪ್ರೋಕಲ್ ಟ್ಯಾಕ್ಸ್ ಘೋಷಣೆ ಮಾಡಿದ್ದಾರೆ. ಆ ಮೂಲಕ ಜಗತ್ತಿನ ಮೇಲೆಯೇ ತೆರಿಗೆ ಯುದ್ಧ ಸಾರಿದ್ದಾರೆ ಟ್ರಂಪ್..!
ಟ್ರಂಪ್ ಈ ನಡವಳಿಕೆಗೆ ಕಾರಣ, ಟ್ರಂಪ್ ಪೂರ್ಣಪ್ರಮಾಣದ ರಾಜಕಾರಣಿಯಲ್ಲ. ಅವರೊಬ್ಬ ಉದ್ಯಮಿ/ರಾಜಕಾರಣಿ. ಇದೇ ಇಷ್ಟೆಲ್ಲಾ ಅವಾಂತರಗಳಿಗೆ ಕಾರಣ. ಒಬ್ಬ ಉದ್ಯಮಿಯೂ ಆಗಿರುವುದರಿಂದ ಟ್ರಂಪ್ ಎಲ್ಲವನ್ನೂ ಕೇವಲ ವ್ಯಾಪಾರೀ ದೃಷ್ಟಿಯಿಂದಲೇ ನೋಡುವ ವ್ಯಕ್ತಿ. ಅದರ ಹಿಂದಿನ ರಾಜಕಾರಣ ಕಟ್ಟಿಕೊಂಡು ಟ್ರಂಪ್ʼಗೆ ಏನೂ ಆಗಬೇಕಾಗಿಲ್ಲ.ಅಮೆರಿಕ ಮೊದಲು ಎಂಬ ಸಿದ್ಧಾಂತದ ಟ್ರಂಪ್, ಎಲ್ಲಾ ವಿಷಯಗಳಲ್ಲಿಯೂ ಅಮೆರಿಕಕ್ಕೆ ಲಾಭವಾಗಬೇಕು ಎಂದು ಬಯಸ್ತಿರೋ ವ್ಯಕ್ತಿ. ಇದು ಹಲವು ವಿಷಯಗಳಲ್ಲಿ ಅಂತಾರಾಷ್ಟ್ರೀಯ ಮಟ್ಟದ ತಿಕ್ಕಾಟಕ್ಕೆ ಕಾರಣವಾಗ್ತಿದೆ. ಆದರೆ ಒಂದು ಬಾರಿಗೆ ಅಂಟಿಕೊಂಡ ತನ್ನ ನಿಲುವಿನಿಂದ ಹಿಂದೆ ಸರಿಯುವ ಮನಸ್ಥಿತಿಯ ವ್ಯಕ್ತಿಯಲ್ಲ ಟ್ರಂಪ್. ಅದಕ್ಕೇ ಚುನಾವಣಾ ಪ್ರಚಾರದ ಸಮಯದಲ್ಲಿ ನೀಡಿದ್ದ ಭರವಸೆಯಂತೆ, ರೆಸಿಪ್ರೋಕಲ್ ಟ್ಯಾಕ್ಸ್ ಜಾರಿಗೊಳಿಸಿದ್ದಾರೆ ಟ್ರಂಪ್..!
ಟ್ರಂಪ್ʼರ ಈ ನಿರ್ಧಾರ ಹಲವು ದೇಶಗಳಿಗೆ ಸಮಸ್ಯೆ ತಂದೊಡ್ಡುವ ಸಾಧ್ಯತೆ ಇದೆ. ಸಿಕ್ಕ ಸಿಕ್ಕ ದೇಶಗಳ ಮೇಲೆ ತೆರಿಗೆ ವಿಧಿಸುವ ಟ್ರಂಪ್ ನಿರ್ಧಾರ, ಜಾಗತಿಕ ಪೂರೈಕೆಯ ಸರಪಳಿಯ ಮೇಲೂ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆಯಿದೆ. ಟ್ರಂಪ್ ಈ ನಿರ್ಧಾರ ಮುಂದಿನ ದಿನಗಳಲ್ಲಿ ಸ್ವತಃ ಅಮೆರಿಕನ್ನರಿಗೇ ಸಮಸ್ಯೆ ತಂದೊಡ್ಡಲಿದೆ ಎಂದು ಕೆಲವು ಆರ್ಥಿಕ ತಜ್ನರು ಎಚ್ಚರಿಸಿದ್ದಾರೆ. ಟ್ರಂಪ್ʼರ ತೆರಿಗೆ ಹೆಚ್ಚಿಸುವ ನಿರ್ಧಾರ ಅಮೆರಿಕದಲ್ಲಿ, ಆ ವಸ್ತುಗಳ ಬೆಲೆ ಹೆಚ್ಚಳಕ್ಕೆ ಕಾರಣವಾಗುತ್ತದೆ. ಅಂತಿಮವಾಗಿ ಇದರ ಭಾರ ಅಮೆರಿಕದ ನಾಗರಿಕರ ಮೇಲೆಯೇ ಬೀಳುತ್ತದೆ. ಹಾಗಾಗಿ ಇಂತಹ ನಿರ್ಧಾರ, ಮುಂದಿನ ದಿನಗಳಲ್ಲಿ ಅಮೆರಿಕದ ಆರ್ಥಿಕತೆಯ ಮೇಲೂ ಪರಿಣಾಮ ಬೀರಬಹುದು ಎನ್ನುವುದು ತಜ್ನರ ಅಭಿಮತ. ಯಾವಾಗ ಟ್ರಂಪ್ ರೆಸಿಪ್ರೋಕಲ್ ಟ್ಯಾಕ್ಸ್ ಘೋಷಿಸಿದರೋ, ಅದಕ್ಕೆ ಮುಯ್ಯಿಗೆ ಮುಯ್ಯಿ ಎನ್ನುವಂತೆ ಹಲವು ದೇಶಗಳು ಅಮೆರಿಕದ ವಿರುದ್ಧವೂ ತೆರಿಗೆ ಘೋಷಿಸುತ್ತಿವೆ. ಇದು ಮುಂದಿನ ದಿನಗಳಲ್ಲಿ ನೇರ ವ್ಯಾಪಾರೀ ಯುದ್ಧವಾಗಿ ಬದಲಾದರೂ ಅಚ್ಚರಿಯಿಲ್ಲ..!

ಡೊನಾಲ್ಡ್ ಟ್ರಂಪ್ʼರ ಈ ನಿರ್ಧಾರ ಭಾರತದ ಮೇಲೆ ಎಷ್ಟರ ಮಟ್ಟಿನ ಪರಿಣಾಮ ಬೀರಲಿದೆ ಅನ್ನೋದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ. ನಾವು ಈ ತೆರಿಗೆ ಹೇರಿಕೆಯ ನಿರ್ಧಾರದ ಪರಿಣಾಮವನ್ನು ಪರಿಶೀಲಿಸುತ್ತಿದ್ದೇವೆ ಎMದು ಭಾರತದ ವಿದೇಶಾಂಗ ಇಲಾಖೆ ತಿಳಿಸಿದೆ. ಭಾರತ ಅಮೆರಿಕಕ್ಕೆ ಅಕ್ಕಿ, ಸಾಂಬಾರು ಪದಾರ್ಥಗಳು, ಸ್ಟೀಲ್, ಅಲ್ಯೂಮೀನಿಯಂ, ಔಷಧಗಳು, ರತ್ನಾಭರಣಗಳು, ಎಲೆಕ್ಟ್ರಾನಿಕ್ಸ್, ರೆಡಿಮೇಡ್ ಉಡುಪುಗಳು ಸೇರಿದಂತೆ ಹಲವು ವಸ್ತುಗಳನ್ನು ರಫ್ತು ಮಾಡುತ್ತದೆ. ಆದರೆ ಕೆಲವು ತಜ್ನರ ಪ್ರಕಾರ, ಭಾರತದ ಮೇಲೆ ಟ್ರಂಪ್ ತೆರಿಗೆಯು ಅಷ್ಟೇನೂ ಪರಿಣಾಮ ಬೀರುವುದಿಲ್ಲ. ಕಾರಣ ಭಾರತ ರಪ್ತಿನಲ್ಲಿ ಅಮೆರಿಕದ ಮೇಲೆ ಅಷ್ಟಾಗಿ ಅವಲಂಬನೆಯಾಗಿಲ್ಲ. ಇದಕ್ಕೆ ವ್ಯತಿರಿಕ್ತವಾಗಿ ಭಾರತಕ್ಕೆ ಇದರಿಂದ ಅನುಕೂಲವೇ ಆಗಬಹುದು ಎನ್ನುತ್ತಿದ್ದಾರೆ. ಕಾರಣ ಏಷ್ಯಾದ ಇತರ ದೇಶಗಳಿಗೆ ಹೋಲಿಸಿದ್ರೆ, ಭಾರತದ ಮೇಲೆ ವಿಧಿಸಿರುವ ತೆರಿಗೆ ಕಡಿಮೆ(26%). ಹಾಗಾಗಿ ಇತರ ಏಷ್ಯಾ ದೇಶಗಳಿಗೆ ಹೋಲಿಸಿದ್ರೆ, ಭಾರತ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತನ್ನ ವಸ್ತುಗಳನ್ನ ಸ್ಪರ್ಧಾತ್ಮಕ ಬೆಲೆಯಲ್ಲಿ ಮಾರಾಟ ಮಾಡೋದು ಸಾಧ್ಯವಿದೆ. ಈಗಾಗಲೇ ಭಾರತದಿಂದ ಹೊರಹೋಗಿರುವ ಕೆಲ ಅಂತಾರಾಷ್ಟ್ರೀಯ ಬ್ರ್ಯಾಂಡ್ʼಗಳು ತಮ್ಮ ಉತ್ಪಾದನಾ ಘಟಕಗಳನ್ನು ಪುನಃ ಭಾರತದಲ್ಲಿ ತೆರೆಯಬಹುದು ಎನ್ನುವ ನಿರೀಕ್ಷೆಗಳೂ ಇವೆ. ಹಾಗಾಗಿ ಟ್ರಂಪ ಹೊಸ ತೆರಿಗೆಯ ನಿರ್ಧಾರ ಅಷ್ಟಾಗಿ ಭಾರತದ ಮೇಲೆ ಪರಿಣಾಮ ಬೀರದು ಎನ್ನುವ ವಿಶ್ಲೇ಼ಷಣೆಯೂ ಕೇಳಿಬರುತ್ತಿದೆ.
ಆದರೆ ಟ್ರಂಪ್ʼರ ಈ ನಡೆಯಿಂದ, ಚೈನಾ ಹಾಗೂ ಅಮೆರಿಕ ನಡುವಿನ ವ್ಯಾಪಾರೀ ಯುದ್ಧ, ಮತ್ತೊಂದು ಮಜಲಿಗೆ ತಲುಪುವ ಎಲ್ಲಾ ಲಕ್ಷಣಗಳೂ ಕಾಣುತ್ತಿವೆ. ಈ ಮೊದಲೇ ಚೈನಾದ ವಸ್ತುಗಳ ಮೇಲೆ 20% ತೆರಿಗೆ ಹೇರಿದ್ದ ಟ್ರಂಪ್, ಈಗ ಹೊಸದಾಗಿ ಮತ್ತೆ 34% ತೆರಿಗೆಯನ್ನ ಚೈನಾದ ವಸ್ತುಗಳ ಮೇಲೆ ಘೋಷಿಸಿದ್ದಾರೆ. ಹಾಗಾಗಿ ಚೈನಾ ವಸ್ತುಗಳ ಮೇಲೆ ಅಮೆರಿಕದ ಒಟ್ಟೂ ತೆರಿಗೆಯ ಪ್ರಮಾಣ 54%ಗೆ ಮುಟ್ಟಿದೆ. ಇದಕ್ಕೆ ಕೆರಳಿ ಕೆಂಡವಾಗಿರುವ ಚೈನಾ, ಇದು ಅಂತಾರಾಷ್ಟ್ರೀಯ ವ್ಯಾಪಾರ ಒಪ್ಪಂದದ ಸ್ಪಷ್ಟ ಉಲ್ಲಂಘನೆ ಎಂದು ತಿಳಿಸಿದೆ. ಅಲ್ಲದೇ ಟ್ರಂಪ್ ಜೊತೆ ನೇರವಾದ ವ್ಯಾಪಾರೀ ಸಮರಕ್ಕೆ ಇಳಿದಿರುವ ಚೈನಾ, ಅಮೆರಿಕದ ವಸ್ತುಗಳ ಮೇಲೆ ತಾನೂ ಸಹ 34% ತೆರಿಗೆ ವಿಧಿಸಿ ಆದೇಶಿಸಿದೆ. ಅಷ್ಟೇ ಅಲ್ಲ, ಚೈನಾದಿಂದ ಅಮೆರಿಕಕ್ಕೆ ರಫ್ತಾಗುತ್ತಿದ್ದ rare earth minarals ಮೇಲೂ ಕೆಲವು ನಿರ್ಬಂಧ ವಿಧಿಸಿ ಆದೇಶ ಹೊರಡಿಸಿದೆ. ಈ rare earth minarals ಕೇವಲ ಚೈನಾದಿಂದ ಮಾತ್ರ ಪೂರೈಕೆಯಾಗುತ್ತಿದ್ದು, ಇದಕ್ಕೆ ಪರ್ಯಾಯ ಮಾರ್ಗವನ್ನು ಹುಡುಕಿಕೊಳ್ಳೋದು ಅಮೆರಿಕಕ್ಕೆ ಕಷ್ಟಸಾಧ್ಯವಾಗಲಿದೆ. ಈ minaralಗಳು ಕೆಲವು ವಸ್ತುಗಳ ತಯಾರಿಕೆಯಲ್ಲಿ ಅಗತ್ಯವಾಗಿ ಬೇಕಾದ ವಸ್ತುಗಳಾಗಿವೆ.
ಆದರೆ ಟ್ರಂಪ್ ತೆರಿಗೆ ನೀತಿಯಿಂದ ಜಾಗತಿಕ ಉದ್ಯೋಗ ನಷ್ಟ, ಆರ್ಥಿಕ ಹಿಂಜರಿತದಂತಹ ಸಮಸ್ಯೆಗಳು ಎದುರಾಗುವ ಸಾಧ್ಯತೆಯಿದೆ. ಹಲವು ದೇಶಗಳ ಆರ್ಥಿಕತೆಯ ಮೇಲೂ ಟ್ರಂಪ್ ತೆರಿಗೆ ನೀತಿ ಪ್ರತಿಕೂಲ ಪರಿಣಾಮ ಬೀರುವ ಎಲ್ಲಾ ಸಾಧ್ಯತೆಗಳಿವೆ. ಇದು ಹಲವು ದೇಶಗಳೊಂದಿಗಿನ ಅಮೆರಿಕದ ರಾಜತಾಂತ್ರಿಕ ಸಂಬಂಧಗಳಲ್ಲಿ ಬಿರುಕು ಮೂಡಿಸುವ ಸಾಧ್ಯತೆಯೂ ಇದೆ. ಒಟ್ಟಿನಲ್ಲಿ ತಾನು ಅಧಿಕಾರಕ್ಕೆ ಬಂದ ಕೆಲವೇ ಸಮಯದಲ್ಲಿ, ಸ್ನೇಹಿತರಿಗಿಂತ ಹೆಚ್ಚಾಗಿ ವೈರಿಗಳನ್ನೇ ಸೃಷ್ಟಿಸಿಕೊಳ್ತಿದ್ದಾರೆ ಟ್ರಂಪ್ ಎಂದರೂ ತಪ್ಪಿಲ್ಲ..!