ರಾಷ್ಟ್ರಿಯ ಸ್ವಯಂಸೇವಕ ಸಂಘ (ಆರ್.ಎಸ್.ಎಸ್) ಬಗ್ಗೆ ಲಘುವಾಗಿ ಮಾತನಾಡುವುದು, ಅಪಪ್ರಚಾರ ಮಾಡುವುದು ಇಂದು ನೆನ್ನೆಯದ್ದಲ್ಲ. ಅವಹೇಳನಾಕಾರಿಯಾಗಿ ಮಾತನಾಡಿ, ಅವರು ದೇಶಕ್ಕೆ ನೀಡುವ ನಿ:ಸ್ವಾರ್ಥ ಸೇವೆಯನ್ನು ಸ್ಮರಿಸದೇ, ಶ್ಲಾಘಿಸದೇ ಕೇವಲ ಇಲ್ಲದ, ಸಲ್ಲದ ಊಹಾಪೋಹಕ ವಿಷಯಗಳನ್ನು ಜನರ ಮುಂದಿಡುತ್ತಾ ಬಂದಿರುವ, ಹಾಗೆಯೇ ಇನ್ನೂ ನಡೆದುಕೊಂಡು ಬರುತ್ತಿರುವವರ ಪಟ್ಟಿ ಬಹಳ ದೊಡ್ಡದಿದೆ. ಈ ಪಟ್ಟಿಗೆ ಒಂದು ಕಾಲದಲ್ಲಿ ಕೇವಲ ಕಮ್ಯುನಿಸ್ಟ್ ವಿಚಾರಧಾರೆಯವರಷ್ಟೇ ಇದ್ದರಾದರೂ ಇತ್ತಿಚೆಗೆ ಪ್ರತಿಯೊಂದು ರಾಜಕೀಯ ಪಕ್ಷಗಳು, ಆ ಪಕ್ಷದ/ವರಿಷ್ಟರ ಕೃಪಾಕಟಾಕ್ಷಕ್ಕೆ ಪಾತ್ರರಾದ ಗಣ್ಯರು ಸಾಹಿತಿಗಳು, ಚಿಂತಕರು, ಇತಿಹಾಸ ತಜ್ಞರು ಎಲ್ಲರೂ ಸೇರಿಕೊಂಡಿದ್ದಾರೆ.

೧೯೩೪ ರಲ್ಲಿ ವಾರ್ಧಾದಲ್ಲಿ ಗಾಂಧಿಜೀ (ಮಹಾತ್ಮ) ಯವರ ಆಶ್ರಮದ ಬಳಿಯಲ್ಲಿಯೇ ಸಂಘದ ಕ್ಯಾಂಪ್ ಒಂದು ನಡೆಯುತ್ತಿತ್ತು. ಆ ಕ್ಯಾಂಪ್ ಅನ್ನು ಗಮನಿಸಿದ ಗಾಂಧಿಜೀ ಅಲ್ಲಿದ್ದವರನ್ನು ಭೇಟಿಯಾಗಬೇಕೆಂದು ಇಷ್ಟಪಟ್ಟು ಸ್ವಯಂಸೇವಕರನ್ನು ಸಂದರ್ಶಿಸಿ, ಅವರ ಜಾತಿಗಳನ್ನು ಕೇಳಿದಾಗ ಎಲ್ಲರೂ ತಾವು “ಹಿಂದೂ” ಎಂದು ಹೇಳಿಕೊಂಡಿದ್ದು, ಅವರಲ್ಲಿ ಮೇಲ್ಜಾತಿ, ಕೀಳ್ಜಾತಿ, ಅಸ್ಪೃಷ್ಯತಾ ಮನೋಭಾವವಿಲ್ಲದಿರುವುದನ್ನು ಕಂಡು, ಪರಿಶೀಲಿಸಿ(!) ಸಂಘದ ಸಂಸ್ಥಾಪಕರಾದ ಪರಮಪೂಜನೀಯ ಕೇಶವ್ ಬಲಿರಾಮ್ ಹೆಡಗೇವಾರ್ ರನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘ ದ ಸ್ಥಾಪನೆ ಹಾಗು ಹಿಂದೂ ಸಮಾಜವನ್ನು ಬಲಿಷ್ಠಗೊಳಿಸುವ ಧ್ಯೇಯವನ್ನು ಕುರಿತು, “ಉತ್ತಮ ಸಂಘಟಿತ ಮತ್ತು ಶಿಸ್ತಿನ ದೇಹ” ಎಂದು ಶ್ಲಾಘಿಸಿರುವುದನ್ನು ಚೆನೈನ “ದಿ ಹಿಂದೂ” ಪತ್ರಿಕೆ ವರದಿ ಮಾಡಿದೆ. (೧೭-Seಠಿಣ-೧೯೪೭). ವರದಿ ಪ್ರಕಟವಾದದ್ದು, ಈ ಸಂದರ್ಭದಲ್ಲಿ ಸ್ವಾತಂತ್ರ್ಯಾ ನಂತರ ಗಾಂಧಿಜೀ ಉಳಿದುಕೊಂಡಿದ್ದು, ದೆಹಲಿಯ ಭಂಗಿ ಕಾಲೋನಿಯಲ್ಲಿ. ಮುಸ್ಲಿಮರಿಂದ ಅವರಿಗೆ ಜೀವ ಭಯವಿದೆ ಎಂದು ಕೆಲ ಮೂಲಗಳಿಂದ ತಿಳಿದ ಮೇಲೆ, ಆಚಾರ್ಯ ಕೃಪಲಾನಿಯವರು (ಅಂದಿನ ಕಾಂಗ್ರೆಸ್ ಅಧ್ಯಕ್ಷರು) ಸಂಘಕ್ಕೆ ತಮ್ಮ ಸ್ವಯಂಸೇವಕರನ್ನು ಗಾಂಧಿಜೀಯ ರಕ್ಷಣೆಗೆ ಕೇಳಿಕೊಂಡಿದ್ದರು.

ಸ್ವಯಂಸೇವಕರು ಗಾಂಧೀಜಿ ಯವರ ಜೊತೆಗೇ ಇರುತ್ತಿದ್ದರು. ಭಂಗಿ ಕಾಲೋನಿಯಲ್ಲಿ ನಡೆದ ಒಂದು ಸಂಘದ ಕಾರ್ಯಕ್ರಮದಲ್ಲಿ ಗಾಂಧಿಜೀ ಪಾಲ್ಗೊಂಡು ಸ್ವಯಂಸೇವಕರನ್ನು ಉದ್ದೇಶಿಸಿ ಮಾತನಾಡಿದ್ದರು. ಮಹಾತ್ಮ ಗಾಂಧಿಯವರನ್ನು ಕೊಂದಿದ್ದು ನಾತುರಾಂ ಗೋಡ್ಸೆ. ನಾತುರಾಮ್ ಗೋಡ್ಸೆ ೧೯೩೦ ರಲ್ಲೇ ಆರ್.ಎಸ್.ಎಸ್ ಅನ್ನು ಬಿಟ್ಟಿದ್ದ. ಅಲ್ಲದೇ ಹಲವಾರು ನ್ಯಾಯಾಲಯ ವಿಚಾರಣೆಗಳ ನಂತರ ತಿಳಿದು ಬಂದಿರುವುದೂ ಆರ್.ಎಸ್.ಎಸ್ ಗೂ ಗೋಡ್ಸೆಗೂ ಯಾವ ಸಂಬಂಧವೂ ಇಲ್ಲವೆಂದು. ಮಾಹಾತ್ಮರ ಹತ್ಯೆಯಲ್ಲಿ ಸಂಘ ಶಾಮೀಲು ಆಗಿಲ್ಲವೆಂದು. ಇನ್ನು ಗಾಂಧಿಜೀಯ ಹತ್ಯೆಯ ನಂತರ ಪಂಡಿತ್ ನೆಹರೂ ರವರು ಅಂದಿನ ಸಂಘದ ಸರಸಂಗಚಾಲಕರಾದ ಪರಮಪೂಜನೀಯ ಗುರೂಜೀ ಗೋಳ್ವಾಲ್ಕರ್ ರನ್ನು ಬಂಧಿಸಿದರು. ಇನ್ನೆಂದೂ ಭಾಗವಾ ಧ್ವಜ ಹಾರಾಡಲು ನನ್ನ ದೇಶದಲ್ಲಿ ಒಂದಿಂಚು ಜಾಗವನ್ನೂ ಕೊಡುವುದಿಲ್ಲ ಎಂದ ನೆಹರೂ ತಪ್ಪು ಮಾಡಿದ್ದು ಗಾಂಧಿಜೀಯ ಹತ್ಯೆಯನ್ನು ಇಡಿಯ ಸಂಘದ ಕೃತ್ಯ ಎಂದು ಹೆಸರಿಸುವಲ್ಲಿ. ಇಂತಹ ಬಾಲಿಶ ಅಪವಾದದಿಂದ ಸಂಘಕ್ಕೆ ನಿರ್ಬಂಧ ಹೇರಲಾಗಿತ್ತಾದರೂ, ನಮ್ಮ ದೇಶದ ನ್ಯಾಯ ವ್ಯವಸ್ಥೆಯೇ ಗಾಂಧಿಜೀ ಹತ್ಯೆ ಒಬ್ಬ ವ್ಯಕ್ತಿಯಿಂದ ಆದದ್ದು ಎಂದೂ ಅದಕ್ಕೆ ಸಂಸ್ಥೆಯನ್ನು ದೂಷಿಸಬಾರದೆಂದೂ ತೀರ್ಪಿತ್ತ ನಂತರ ಸಂಘಕ್ಕೆ ಮರು ಜೀವನ ದೊರೆಯಿತು.

ಸರ್ದಾರ್ ವಲ್ಲಭ್ ಭಾಯಿ ಪಟೇಲರು ಗುರೂಜೀ ಗೋಳ್ವಾಲ್ಕರ್ಗೆ ಬರೆದ ಪತ್ರವನ್ನಷ್ಟೇ ಸಾರಿ ಸಾರಿ ತೋರಿಸುವ ಇಂದಿನ ಮಾಧ್ಯಮ, ಪಕ್ಷಪಾತಿಗಳು, ಪೂರ್ವಗ್ರಹಪೀಡಿತರು, ತದನಂತರದ ಪಟೇಲರ ಸಂಘದ ಬಗೆಗಿನ ವಿಶ್ವಾಸದ ನುಡಿಯನ್ನಾಗಲಿ, ಸಂಘದ ಸೇವಾ ಸಹಾಯದ ಬಗ್ಗೆ ಇದ್ದ ಗೌರವದ ಬಗ್ಗೆಯಾಗಲಿ ಚಕಾರವೆತ್ತುವುದಿಲ್ಲ. ಕಳೆದ ೯೯ ವರ್ಷಗಳಲ್ಲಿ ಸಂಘ ಬೆಳೆದಿರುವ ಎತ್ತರ ಮತ್ತು ಈ ಎತ್ತರಕ್ಕೆ ಬೆಳೆಯಲು ಪಟ್ಟ ಶ್ರಮವಂತೂ ಅನನ್ಯ. ಅಂದು ಕೇವಲ ೨೦ ಸಾವಿರ ಶಾಖೆಗಳನ್ನು ಹೊಂದಿದ್ದ ಆರ್ ಎಸ್ ಎಸ್ ಇಂದು ೭೩ ಸಾವಿರಕ್ಕೂ ಅಧಿಕ ಶಾಖೆಗಳನ್ನು ಹೊಂದಿದೆ. ರಾಷ್ಟ್ರದ ಸರ್ವಾಂಗೀಣ ಅಭಿವೃದ್ಧಿ ಮತ್ತು ಉತ್ತಮ ಸಮಾಜದ ನಿರ್ಮಾಣದ ಗುರಿಯನ್ನು ಹೊಂದಿರುವ ಸಂಘದ್ದು ನಿಸ್ವಾರ್ಥ ಮತ್ತು ಪ್ರಾಮಾಣಿಕ ದೇಶ ಪ್ರಗತಿ ಮತ್ತು ಸಂರಕ್ಷಣೆಯ ನಿಲುವು. ಇದರಲ್ಲಿ ಎರಡು ಮಾತಿಲ್ಲ.

ವೈವಿಧ್ಯತೆಯಲ್ಲಿ ಏಕತೆಯನ್ನು ಹೊಂದಿರುವ ಭಾರತದಲ್ಲಿ ಸಾಮರಸ್ಯ ಸಹಬಾಳ್ವೆ ಎಂಬುದು ಸುಲಭದ ಮಾತಲ್ಲ. ಅದರಲ್ಲಿಯೂ ತನ್ನ ತಾಯ್ನೆಲವನ್ನು ಸಂರಕ್ಷಿಸುವ ಸಂಕಲ್ಪಗಳನ್ನು ತಮ್ಮ ಕೊನೆ ಉಸಿರಿರುವವರೆಗೆ ಕಾಯ್ದಿಟ್ಟುಕೊಂಡು ಅದಕ್ಕೋಸ್ಕರ ತನು, ಮನ ಮತ್ತು ಧನವನ್ನು ಅರ್ಪಿಸಿ ಅದಕ್ಕೆ ಕಟಿಬದ್ಧರಾಗಿರುವುದು ಸಂಘದ ಪರಮೋದ್ಧೇಶ, ಕಳೆದ ೯೯ ವರ್ಷಗಳಲ್ಲಿ ಶಿಸ್ತು ಮತ್ತು ಬದ್ಧತೆಗೆ ಅನ್ವರ್ಥ ವಾದ ಆರ್ ಎಸ್ ಎಸ್ ನಡೆದು ಬಂದ ದಾರಿ ಗಮನಾರ್ಹ. ೧೯೪೦ರ ನಂತರ ಹೆಡಗೆವಾರ್ ತರುವಾಯ ಸಂಘದ ಅರ್ಥಾತ್ ಎರಡನೆ ಸರ ಸಂಘ ಚಾಲಕರಾಗಿದ್ದ ಮಾಧವ್ರಾವ್ ಸದಾಶಿವರಾವ್ ಗೋಳ್ವಾಲ್ಕರ್ ಗೋಹತ್ಯೆ ನಿಷೇಧ ಆಂದೋಲನದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡವರು. ಮಿಗಿಲಾಗಿ ೧೯೬೪ರಲ್ಲಿ ಮುಂಬಯಿನಲ್ಲಿ ಗುರೂಜಿ ಮುಂಬಯಿನಲ್ಲಿ ವಿಶ್ವ ಹಿಂದೂ ಪರಿಷತ್ ಸ್ಥಾಪಿಸಿದರು.

ಬಾಳಾಸಾಹೇಬ್ ದೇವರಸ್, ಪ್ರೊ. ರಾಜೇಂದ್ರ ಸಿಂಗ್ (ರಜ್ಜು ಭಯ್ಯ) ಕು. ಸಿ.ಸುದರ್ಶನ್ ಅವರೆಲ್ಲರೂ ಸಂಘದ ಅತಿ ಪ್ರಮುಖ ಹುದ್ದೆಯನ್ನು ಸಮರ್ಥವಾಗಿ ನಿರ್ವಹಿಸಿದವರು. ಶತ ಮಾನದ ಹೊಸ್ತಿಲಿನಲ್ಲಿರುವ ಸಂಘದ ಗುರುತರ ಹೊಣೆಯನ್ನು ಹೊತ್ತಿರುವವರು ಡಾ. ಮೋಹನ್ ಭಾಗ್ವತ್. ಸಂಘವನ್ನು ಹಳಿಯುವ ಸಂಘಟನೆಗಳಿಗೆ ಆರ್.ಎಸ್.ಎಸ್ ಶಾಖೆಯಲ್ಲಿ ಏನು ನಡೆಯುತ್ತದೆಂದು ತಿಳಿಸುವ ಗೋಜಿಗೆ ಹೋಗುವ ಅಗತ್ಯವಿಲ್ಲ. ಕಾರಣ ಅವರೆಲ್ಲವನ್ನೂ ತಿಳಿದುಕೊಂಡಿರುತ್ತಾರೆ. ಆದರೆ ಸಂಕ್ಷಿಪ್ತವಾಗಿ ಹೇಳುವುದಾದರೆ, ಆ ಒಂದು ಗಂಟೆಯ ಆರ್.ಎಸ್.ಎಸ್ ಶಾಖೆಯಲ್ಲಿ ದೇಶ ಪ್ರೇಮ, ಸ್ವಾರ್ಥ ತ್ಯಾಗದ ಬೌದ್ಧಿಕ, ಶಾರೀರಿಕ ಅಭ್ಯಾಸ ನಡೆಯುತ್ತದೆ. ಶಾಖೆಗಳಲ್ಲಿ ಏಕಾತ್ಮತಾ ಸ್ತೋತ್ರವೊಂದನ್ನು ಸ್ವಯಂಸೇವಕರು ನಿತ್ಯವೂ ಹಾಡುತ್ತಾರೆ. ಆ ಸ್ತೋತ್ರದಲ್ಲಿರುವುದು ನಮ್ಮ ದೇಶದ ವರ್ಣನೆ, ಇಲ್ಲಿ ಹರಿಯುವ ನದಿಗಳು, ಪರ್ವತಗಳು, ಈ ದೇಶ ಕಂಡ ಅಪ್ರತಿಮ ಸಾಧಕರು, ದೇಶ ಸೇವಕರು, ವೀರರು ಇವರುಗಳಿಗೆ ನಮನ. ಇದೇ ಸ್ತೋತ್ರದಲ್ಲಿ ದಾದಾಭಾಯಿ ನವರೋಜೀ (ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಸ್ಥಾಪಕ), ಗೋಪಬಂಧು, ತಿಲಕರು, ಮಹಾತ್ಮಾ ಗಾಂಧಿ, ಅಂಬೇಡ್ಕರ್, ಸಾವರ್ಕರ್…. ಹೀಗೆ ಹಲವಾರು ಆದರ್ಶ ದೇಶಭಕ್ತರ ಸಂಸ್ಮರಣೆಯಾಗುತ್ತದೆ. ಪೂರ್ತಿ ಸ್ತೋತ್ರ ಕೇಳಿದ ಮೇಲೆ ಇಲ್ಲಿ ಘಜನೀ ಮೊಹಮ್ಮದ್, ಬಾಬರ್, ಔರಂಗ್ಜೇಬ್, ಟಿಪ್ಪು ಸುಲ್ತಾನ್ರ ಹೆಸರು ಕಾಣುವುದಿಲ್ಲವೆಂದರೆ, ಅದು ಹಾಗೆ ಪ್ರಶ್ನಿಸುವವರ ಇತಿಹಾಸಕ್ಕೆ ಇಟ್ಟ ಕನ್ನಡಿ.
ಇದನ್ನೂ ಓದಿ : https://ashwaveega.com/as-soon-as-the-cm-dcm-comes-the-banner-of-the-next-cm-created-a-stir/