
ashada a crowd of devotees gathers at chamundi hills
ಆಷಾಢ ಮಾಸದ ಮೊದಲ ಶುಕ್ರವಾರವಾದ ಇಂದು ನಾಡಿನ ಅಧಿದೇವತೆ ಚಾಮುಂಡಿತಾಯಿಯ ದರ್ಶನಕ್ಕೆ ಭಕ್ತ ಸಾಗರವೇ ಹರಿದು ಬಂದಿದೆ.
ಆಷಾಢ ಮಾಸ ಎಂಬುದು ಶಕ್ತಿ ದೇವತೆಯ ಆರಾಧನೆಗೆ ವಿಶೇಷ ಮಾಸ. ಈ ಮಾಸದಲ್ಲಿ ಬರುವ ನಾಲ್ಕು ಆಷಾಢ ಶುಕ್ರವಾರ ಹಾಗೂ ಚಾಮುಂಡಿ ತಾಯಿಯ ವರ್ಧಂತಿ ದಿನ ತಾಯಿಯ ದರ್ಶನ ಪಡೆಯಲು ರಾಜ್ಯ, ಹೊರ ರಾಜ್ಯಗಳಿಂದ ಭಕ್ತರ ದಂಡೇ ಹರಿದು ಬರುತ್ತದೆ.
ಇಂದು ಬೆಳಗಿನ ಜಾವ 5.30ರಿಂದ ತಾಯಿಯ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಭಕ್ತರು ಬೆಳಗಿನ ಜಾವ 2 ಗಂಟೆಯಿಂದಲೇ ಸರತಿ ಸಾಲಿನಲ್ಲಿ ನಿಂತಿದ್ದರು. ದೇವಾಸ್ಥಾನ ತೆರೆದ ಬಳಿಕ ದರ್ಶನ ಪಡೆದು ಸಂತಸದಿಂದ ಹಿಂತಿರುಗುತ್ತಿದ್ದರು.
“ದರ್ಶನ ಪಡೆದ ಭಕ್ತರಿಗೆ ದೇವಸ್ಥಾನದ ಹೊರಭಾಗದಲ್ಲಿ ಪ್ರಸಾದ ವ್ಯವಸ್ಥೆ ಮಾಡಲಾಗಿದೆ. ಗೋಡಂಬಿ ಸೇರಿದಂತೆ ಕುಂಕುಮ, ಅರಿಶಿಣ ವಿತರಿಸಲಾಯಿತು. ಪ್ರತಿಯೊಬ್ಬರಿಗೂ ಚಾಮುಂಡಿ ಬೆಟ್ಟದ ಕೆಳಭಾಗದ ಲಲಿತ್ ಮಹಲ್ ಮೈದಾನದಿಂದ ಉಚಿತ ಬಸ್ ವ್ಯವಸ್ಥೆ ಮಾಡಲಾಗಿದೆ. ನಗರ ಸಾರಿಗೆಯ 60 ಬಸ್ಗಳನ್ನು ಹಾಗೂ 100 ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. 300 ಹಾಗೂ 2000 ರೂಪಾಯಿಯ ವಿಶೇಷ ದರ್ಶನದ ಟಿಕೆಟ್ ಪಡೆದವರಿಗೆ ಮೂರು ವಿಭಾಗದಲ್ಲಿ ಎಸಿ ಬಸ್ ವ್ಯವಸ್ಥೆ ಮಾಡಲಾಗಿದೆ” ಎಂದು ಮೈಸೂರು ವಿಭಾಗೀಯ ನಿಯಂತ್ರಣಾಧಿಕಾರಿ ವಿರೇಶ್ ಮಾಹಿತಿ ನೀಡಿದರು.
ಮಾಜಿ ಸಚಿವ ಹಾಗೂ ಜೆಡಿಎಸ್ ಶಾಸಕ ಹೆಚ್.ಡಿ.ರೇವಣ್ಣ ಮಾಧ್ಯಮಗಳ ಜೊತೆ ಮಾತನಾಡಿ, “ಪ್ರತೀ ವರ್ಷ ಆಷಾಢದಲ್ಲಿ ವಿಶೇಷವಾಗಿ ಚಾಮುಂಡಿ ತಾಯಿಯ ದರ್ಶನ ಮಾಡುತ್ತೇನೆ. ರಾಜ್ಯದ ಜನರಿಗೆ ಒಳ್ಳೆದಾಗಲಿ. ಒಳ್ಳೆಯ ಮಳೆ ಹಾಗೂ ಬೆಳೆಯಾಗಿ ಜನರು ಚೆನ್ನಾಗಿರಲಿ. ರಾಜ್ಯದ ಜನರ ಮೇಲೆ ಚಾಮುಂಡಿ ತಾಯಿಯ ಆರ್ಶಿರ್ವಾದ ಇರಲಿ” ಎಂದರು.
ಮೊದಲ ಆಷಾಢ ಶುಕ್ರವಾರ ಚಿತ್ರನಟಿ ಶೃತಿ, ಮಾಳವಿಕಾ ಅವಿನಾಶ್ ಸೇರಿದಂತೆ ಹಲವು ಕಿರುತೆರೆಯ ನಟ, ನಟಿಯರು ತಾಯಿಯ ದರ್ಶನ ಪಡೆದರು. ಜಿಲ್ಲಾಧಿಕಾರಿ ಲಕ್ಷ್ಮಿಕಾಂತ್ ರೆಡ್ಡಿ ಕುಟುಂಬಸಮೇತ ತಾಯಿಯ ದರ್ಶನ ಪಡೆದಿದ್ದು ವಿಶೇಷವಾಗಿತ್ತು.